ಧಾರವಾಡ: ಮರಾಠಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡ ಸಂಘಟನೆಗಳು ಡಿ.5ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಬೆನ್ನಲ್ಲೇ, ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನೀಡಿರುವ ಹೇಳಿಕೆ ಕೈ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.
ವೀರಶೈವ-ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆತುರದ ತೀರ್ಮಾನ ಇತರೆ ಸಮುದಾಯಗಳು ಕೂಡ ಮೀಸಲಾತಿ ಪರ ಧ್ವನಿ ಎತ್ತುವಂತೆ ಮಾಡಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಮರಾಠ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಕೋಟಾದಡಿ 2ಎ ಮೀಸಲಾತಿ ಕೊಡಬೇಕು. ಇಲ್ಲವಾದರೆ ಮುಂದಿನ ಎಲ್ಲಾ ಚುನಾವಣೆಗಳನ್ನು ಮರಾಠಿ ಸಮುದಾಯ ಬಹಿಷ್ಕಾರ ಮಾಡುತ್ತದೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.

ಧಾರವಾಡದಲ್ಲಿ ನಡೆದ ಮರಾಠ ಕ್ರಾಂತಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅಂಜಲಿ, ಮರಾಠ ಸಮಾಜದ ಬಗ್ಗೆ ಕಾಳಜಿ ಇದ್ದರೆ 2ಎ ಮೀಸಲಾತಿ ನೀಡಲಿ. ಸಮಾಜದ ಮುಖಂಡರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಗುಡುಗಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ನಾವು ಸಿಎಂ ಯಡಿಯೂರಪ್ಪನವರ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳೂ ಅಲ್ಲ. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ. ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ ಕೊಟ್ಟಿದೀರಿ. ಹಾಗೆಯೇ ಚುನಾವಣಾ ಗಿಮಿಕ್ ಅಂತಾ ಯಾವ ಸಮಾಜಕ್ಕೆ ಏನೇನು ಕೊಡುತ್ತಿರೋ ಕೊಡಿ ಎಂದು ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 50 ಕೋಟಿ ರೂ ಮೀಸಲಿಟ್ಟಿರುವ ಬಗ್ಗೆ ಸಂಶಯವಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಚುನಾವಣೆ ನಂತರ ಕಸದ ಬುಟ್ಟಿಗೆ ಹೋಗಲಿದೆಂಬ ಸಂಶಯವಿದೆ. ಹೀಗಾಗಿ
ಪ್ರಾಧಿಕಾರ-ನಿಗಮ ನಮಗೆ ಬೇಡ. ಸಮಾಜದ ಮುಂದಿನ ಪೀಳಿಗೆ ಏಳಿಗೆ ಆಗಬೇಕಿದೆ. ಇದಕ್ಕಾಗಿ ನಮಗೆ 2 ಎ ಮೀಸಲಾತಿಯೊಂದೇ ಬೇಕು ಎಂದು ಎಂಎಲ್‍ಸಿ ಶ್ರೀನಿವಾಸ್ ಮಾನೆ ಆಗ್ರಹಿಸಿದ್ದಾರೆ.








