Chamarajanagar | ಜನರ ನಿದ್ದೆ ಕೆಡಿಸಿದ ಒಂಟಿ ಸಲಗ
1 min read
Elephant Found in Chamarajanagar saaksha tv
Chamarajanagar | ಜನರ ನಿದ್ದೆ ಕೆಡಿಸಿದ ಒಂಟಿ ಸಲಗ
ಚಾಮರಾಜನಗರ : ಕಾಡಿನಿಂದ ಹೊರ ಬಂದ ಒಂಟಿ ಸಲಗವೊಂದು ಜನರ ನಿದ್ರೆ ಕೆಡಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ದೊಡ್ಡಕೆರೆ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬುಧವಾರ ಕಾಡಾನೆಯೊಂದು ಓಡಾಡಿ ಆತಂಕ ಸೃಷ್ಟಿಸಿತ್ತು.
ಆನೆಯು ಮುಂಜಾನೆ ಮೂರರ ಹೊತ್ತಿಗೆ ರಾಮಸಮುದ್ರ- ಬೂದಿತಿಟ್ಟಿನ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಧ್ಯಾಹ್ನದ ಹೊತ್ತು ಕರಿನಂಜನಪುರ ಸಮೀಪದ ದೊಡ್ಡಕೆರೆಯ ನೀರಿನಲ್ಲಿ ಆನೆ ಕಂಡುಬಂದಿತ್ತು ನಂತರ ಬ್ಯಾಡಮೂಡ್ಲು ಗ್ರಾಮದತ್ತ ಸಾಗಿದೆ.
ಆನೆಯು ಕೃಷಿ ಜಮೀನುಗಳಿಗೆ ನುಗ್ಗಿತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗದ್ದಲ ಮಾಡಿದ್ದರಿಂದ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಜನರನ್ನು ಚದುರಿಸಲು ಪ್ರಯತ್ನಿಸಿದರು.
ಯಳಂದೂರಿನ ಬಿ.ಆರ್.ಟಿ. ಅರಣ್ಯ ವಲಯದ ಭಾಗದಿಂದ ಒಂಟಿಸಲಗ ಬಂದಿದೆ ಎನ್ನಲಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯಕ್ಕೆ ಓಡಿಸುವುದಕ್ಕೆ ರಾತ್ರಿವರೆಗೂ ಪ್ರಯತ್ನಪಟ್ಟರೂ ಆನೆ ಕಾಡಿನತ್ತ ಸಾಗಿಲ್ಲ.

ಬ್ಯಾಡಮೂಡ್ಲು ಭಾಗದಲ್ಲಿ ಕಾಡಾನೆ ಅಡಗಿಕೊಂಡಿದ್ದು ಜನರಿಗೆ ಅಪಾಯಮಾಡಬಾರದು ಎಂದು ಇಂದೂ ಸಹ ಮುಂಜಾನೆಯಿಂದ ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮರವೇರಿ ಆನೆ ವಿಡಿಯೋ ಮಾಡಿದ ಭೂಪ…!
ಕಾಡಿನಿಂದ ಹೊರಬಂದು ರೈತರ ಜಮೀನುಗಳಲ್ಲಿ ಉಪಟಳ ನಡೆಸುತ್ತಿರುವ ಒಂಟಿಸಲಗವನ್ನು ನೋಡಲು ಯುವಕನೋರ್ವ ತೇಗದ ಮರ ಏರಿ ವಿಡಿಯೋ ಮಾಡುವ ದುಸ್ಸಾಹಸ ಮಾಡಿದ್ದಾನೆ.
ನಿನ್ನೆಯಿಂದಲೂ ಕಾಡಾನೆ ಚಾಮರಾಜನಗರ ಪಟ್ಟಣದ ಸಮೀಪ ಅಡ್ಡಾಡುತ್ತಿದ್ದು ಸುದ್ದಿ ತಿಳಿದ ಜನರು ಆನೆ ನೋಡಲು ಗುಂಪುಗುಂಪುಗಿ ತೆರಳಿದ್ರು, ಈ ವೇಳೆ ಕಬ್ಬಿನ ಗದ್ದೆಯೊಳಗೆ ನುಸುಳಿದ್ದ ಆನೆಯನ್ನು ಯುವಕನೋರ್ವ ತೇಗದ ಮರವೇರಿ ಮೊಬೈಲಿನಲ್ಲಿ ವೀಡಿಯೋ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ