ಯುಎಸ್ ಓಪನ್ ಟೂರ್ನಿಗೆ ಪ್ರಮುಖ ಸ್ಪರ್ಧಿಗಳೇ ಸ್ಪರ್ಧಿಸುತ್ತಿಲ್ಲ…!
ಆಗಸ್ಟ್ 31ರಿಂದ ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ ಆರಂಭವಾಗಲಿದೆ. ಆದ್ರೆ ಈ ಟೂರ್ನಿಗೆ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ಕೋವಿಡ್-19 ಸೋಂಕಿನಿಂದಾಗಿ ನ್ಯೂಯಾರ್ಕ್‍ಗೆ ಆಗಮಿಸಲು ಟೆನಿಸ್ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ. ಪ್ರೇಕ್ಷಕರಿಲ್ಲದೇ ಟೂರ್ನಿಯನ್ನು ಆಯೋಜನೆ ಮಾಡಲು ಯುಎಸ್ ಗ್ರ್ಯಾಂಡ್ ಸ್ಲ್ಯಾಂ ಆಯೋಜಕರು ತೀರ್ಮಾನಿಸಿದ್ದಾರೆ. ಆದ್ರೆ ಬೇರೆ ಬೇರೆ ದೇಶಗಳಲ್ಲಿನ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಹಾಲಿ ಚಾಂಪಿಯನ್ ರಫೇಲ್ ನಡಾಲ್, ಮಹಿಳಾ ಟೆನಿಸ್ ನ ನಂಬರ್ ವನ್ ಆಟಗಾರ್ತಿ ಆಶ್ಲೇಘ್ ಬಾರ್ಟಿ ಅವರು ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಇದೀಗ ವಿಶ್ವ ಮಹಿಳಾ ಟೆನಿಸ್ ನ ಐದನೇ ಶ್ರೇಯಾಂಕಿತೆ ಎಲಿನಾ ಸ್ವಿಟೊಲಿನಾ ಹಾಗೂ ಏಳನೇ ಶ್ರೇಯಾಂಕಿತೆ ಕಿಕಿ ಬೆರ್ಟೆನ್ಸ್ ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಯೋಜಕರು ಎಲ್ಲಾ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದಾರೆ. ಈ ಬಗ್ಗೆ ನನಗೆ ಗೌರವ ಇದೆ. ಆದ್ರೆ
ನಾನು ಯುಎಸ್‍ಗೆ ಪ್ರಯಾಣ ಬೆಳೆಸುವುದು ಈ ಸಮಯದಲ್ಲಿ ರಿಸ್ಕ್ ಅಂತ ಅನ್ನಿಸುತ್ತಿದೆ ಎಂದು ಎಲಿನಾ ಸ್ವಿಟೊಲಿನಾ ಹೇಳಿದ್ದಾರೆ. ಎಲಿನಾ ಸ್ವಿಟೊಲಿನಾ ಕಳೆದ ಬಾರಿಯ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಈ ನಡುವೆ ಇಟಲಿಯನ್ ಓಪನ್ ಟೂರ್ನಿಯ ವೇಳಾಪಟ್ಟಿ ಕೂಡ ಸಿದ್ಧವಾಗಿದೆ. ರೋಮ್ ನಲ್ಲಿ ಸೆಪ್ಟಂಬರ್ 20ರಿಂದ ಇಟಲಿಯನ್ ಓಪನ್ ನಡೆಯಲಿದೆ. ಆ ನಂತರ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ ಪ್ಯಾರೀಸ್ ನಲ್ಲಿ ನಡೆಯಲಿದೆ.
ಒಟ್ಟಾರೆ, ಆಯೋಜಕರು ಜೈವಿಕ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಆಯೋಜನೆ ಮಾಡಲು ಮುಂದಾದ್ರೂ ಆಟಗಾರರು ಮಾತ್ರ ಟೂರ್ನಿಯಲ್ಲಿ ಭಾಗವಹಿಸಲು ಸಹಮತ ಸೂಚಿಸುತ್ತಿಲ್ಲ.








