ಕೊರೊನಾಸುರನ ಹೊಡೆತಕ್ಕೆ ರಾಜ್ಯದ ರೈತರ ಆತಂಕಗೊಂಡಿದ್ದಾರೆ. ಕೈಗೆ ಬಂದ ಬೆಳೆಗೆ ಬೆಲೆ ಇಲ್ಲ. ಬೆಲೆ ಇರಲಿ ಅದನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಕಂಗಾಲಾಗಿ ಕೈಗೆ ಬಂದ ತುತ್ತನ್ನು ನೆಲಕ್ಕೆ ಚೆಲ್ಲುವಂತಾಗಿದೆ. ಇಡೀ ರಾಜ್ಯದ ಪ್ರತಿ ಜಿಲ್ಲೆಯ ರೈತನ ಪರಿಸ್ಥಿತಿಯೂ ಇದೇ ಆಗಿದೆ. ರೈತನ ನೆರವಿಗೆ ಬರಬೇಕಾದ ಸರ್ಕಾರ ಬಾಯಲ್ಲಿ ಸಮರೋಪಾದಿ ಕಾರ್ಯ ಎಂದು ಹೇಳುತ್ತಿದ್ದರೂ ವಾಸ್ತವವಾಗಿ ನಡೆಯುತ್ತಿರೋದು ಆಮೆ ವೇಗದಲ್ಲಿ. ಈ ಪರಿಸ್ಥಿತಿಯಲ್ಲಿ ಮಂಡ್ಯ ರೈತರ ನೆರವಿಗೆ ಬರಬೇಕಾದ ಸಂಸದೆ ಸುಮಲತಾ ಅಂಬರೀಷ್ ಅವರು ಜಿಲ್ಲೆಯತ್ತ ಮುಖಮಾಡಿಲ್ಲ.
ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹಣೆಪಟ್ಟಿ ಕಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಸಿದ್ದ ಸುಮಲತಾ ಅಂಬರೀಶ್ ಅವರನ್ನು ಮಂಡ್ಯ ಜನತೆ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಜಯದ ಯಾತ್ರೆ ಮಾಡಿದ್ದರು. ಆದರೆ ಈಗ ಅದೇ ಜನರ ಸಂಕಷ್ಟದ ಸಮಯದಲ್ಲಿರುವಾಗ ಸುಮಲತಾ ಅವರು ಎಲ್ಲಿದ್ದಾರೆ ಎಂದು ಮತದಾರ ಹುಡುಕುವ ಪರಿಸ್ಥಿತಿ ಬಂದಿದೆ.
ಕೊರೊನಾ ಲಾಕ್ ಡೌನ್ ಆದ ಬಳಿಕ ಮಂಡ್ಯ ಜಿಲ್ಲೆಯ ನೂರಾರು ರೈತರು ಬೆಳೆ ನಾಶ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿದೆ. ಆದರೆ ಸಂಸದೆ ಸುಮಲತಾ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಒಂದೆರಡು ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿರುವುದು ಬಿಟ್ಟರೆ, ಸಂಸದೆ ಸುಮಲತಾ ಮಂಡ್ಯಕ್ಕೆ ಆಗಮಿಸಿಲ್ಲ. ಮಂಡ್ಯ ಕ್ಷೇತ್ರದ ಸಂಸದರಾದರೂ ಬೆಂಗಳೂರಿನಲ್ಲಿ ವಾಸ ಮಾಡುವ ಸುಮಲತಾ ಅವರಿಗೆ ಬಡವರ ನೋವು ಎಲ್ಲಿಂದ ಅರ್ಥವಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








