ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಗೆ ಮಹತ್ವದ ಹುದ್ದೆ ಸಿಕ್ಕಿದೆ.
ಎಲೋನ್ ಮಸ್ಕ್ ಅವರು ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರೊಂದಿಗೆ ಸರ್ಕಾರಿ ದಕ್ಷತೆಯ ಇಲಾಖೆಯನ್ನು (Department of Government Efficiency) ನಿರ್ವಹಿಸಲಿದ್ದಾರೆ.
ಈ ಇಬ್ಬರೂ ನಾಯಕರು ಸರ್ಕಾರಕ್ಕೆ ಹೊರಗಿನಿಂದಲೇ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಇವರಿಬ್ಬರಿಂದ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಯಾಗಲಿದೆ ಎಂದು ಟ್ರಂಪ್ (Donald Trump) ಹೇಳಿದ್ದಾರೆ.
ಈ ಇಲಾಖೆ ರಚನೆಯಾಗುವ ಮೊದಲೇ ಅಮೆಕದಲ್ಲಿ DOGE ಎಂದು ಫೇಮಸ್ ಆಗಿತ್ತು. ಇದು ಕ್ರಿಪ್ಟೋ ಕರೆನ್ಸಿಯಾಗಿದ್ದು ಹಲವು ಬಾರಿ ಮಸ್ಕ್ ಅವರು Dogecoin ಬಗ್ಗೆ ಪ್ರಚಾರ ಮಾಡಿದ್ದರು. ಇದು ಟ್ರಂಪ್ ಸರ್ಕಾರದ ಹೊಸ ಇಲಾಖೆ. ಇದರ ಕಾರ್ಯವೈಖರಿ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಇಲಾಖೆ ಅಮೆರಿಕ ಸರ್ಕಾರ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಧ್ಯಯನಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವ ಸಾಧ್ಯತೆಯಿದೆ.
ಮಸ್ಕ್ ವೆಚ್ಚ ಕಡಿತದ ಬಗ್ಗೆ ಮೊದಲಿನಿಂದಲೂ ಮಾತನಾಡಿಕೊಂಡು ಬರುತ್ತಿದ್ದರು. ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದ ನಂತರ ಶೇ. 90ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಹೊರಹಾಕಿದ್ದರು. 6 ಸಾವಿರ ಉದ್ಯೋಗಿಯ ಸಂಖ್ಯೆಯನ್ನು 1 ಸಾವಿರಕ್ಕೆ ಇಳಿಸಿದ್ದರು. ಇದಕ್ಕೂ ಮಸ್ಕ್ ಸಮರ್ಥ ಉತ್ತರ ನೀಡಿದ್ದರು.