saaksha special..
ಅದು ಎಪ್ಪತ್ತರ ದಶಕ. ಆಗಷ್ಟೇ ಇಂದಿರಾ ಗಾಂಧಿಯನ್ನು ಪಕ್ಷವಿರೋಧಿ ಚಟುವಟಿಕೆಯ ಆಪಾದನೆ ಮೇಲೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಎದೆಗುಂದದ ಇಂದಿರಾಗಾಂಧಿ, ಕಾಂಗ್ರೆಸ್ ಐ ಅನ್ನುವ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದರು. ದೇಶದಲ್ಲಿ ಸ್ವಾತಂತ್ರ ನಂತರ 1971 ರ ಸಾರ್ವತ್ರಿಕ ಚುನಾವಣೆಯಲ್ಲಿ, ಇಂದಿರಾ ಗಾಂಧಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರು, ಕಾಂಗ್ರೆಸ್ 518 ರಲ್ಲಿ 352 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಈ ಸಮಯದಲ್ಲಿಯೇ ಒಮ್ಮೆ ಗುಂಗಿ ಗುಡಿಯಾ ಎಂದು ಕರೆಯಲ್ಪಡುತ್ತಿದ್ದ ಇಂದಿರಾ ಗಾಂಧಿ ಅವರ ಚಿತ್ರಣವನ್ನು ಮಾರ್ಪಡಿಸಿಕೊಂಡರು. ನಂತರ ಇಂದಿರಾ ಅವರನ್ನು `ಮಾ ದುರ್ಗಾ’ ಮತ್ತು ‘ಐರನ್ ಲೇಡಿ’ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಪರೋಕ್ಷವಾಗಿ ಬಾಂಗ್ಲಾವನ್ನು ಪಾಕಿಸ್ತಾನದ ಕಪಿ ಮುಷ್ಠಿಯಿಂದ ವಿಮೋಚನೆ ಗೊಳಿಸಿದ್ದಲ್ಲದೆ ಪಾಕಿಸ್ತಾನವನ್ನು ನಮ್ಮ ಸೈನಿಕರು ಹಿಮ್ಮೆಟಿಸಿದ್ದು ಕಾರಣ.
ಜೂನ್ 12, 1975 ರಂದು, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗ್ಮೋಹನ್ ಲಾಲ್ ಸಿನ್ಹಾ ಅವರು ರಾಯ್ ಬರೇಲಿಯ ಯುನೈಟೆಡ್ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ರಾಜನಾರಾಯಣ್ ಅವರು ಸಲ್ಲಿಸಿದ್ದ ಅರ್ಜಿಯ ಮೇಲೆ ತೀರ್ಪು ನೀಡಿದರು. ಅರ್ಜಿಯಲ್ಲಿ, ರಾಜನಾರಾಯಣ್ ಅವರು ಇಂದಿರಾ ಗಾಂಧಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದರಲ್ಲಿ ಮತದಾರರಿಗೆ ಮದ್ಯ, ಲಂಚ ನೀಡುವುದು, ವಾಯುಪಡೆಯ ವಿಮಾನಗಳನ್ನು ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಂಡರು ಎಂದು ಆಪಾದನೆ ಮಾಡಿದ್ದರು.
ಅದೇಕೋ ಇಂದಿರಾ ಮನಸ್ಸಿನಲ್ಲಿ ಇದ್ದ ಗೊಂದಲ ಅನುಮಾನ ನಿಜವಾಗಲೂ ಜಾಸ್ತಿ ಸಮಯ ಬೇಕಾಗಿರಲಿಲ್ಲ. ಆದರೆ ಕಾನೂನಿನ ಸಂಕೋಲೆ ಇಂದಿರಾಗೆ ಯಾವುದೇ ವಿನಾಯಿತಿ ದೊರೆಯಲಿಲ್ಲ. ಚುನಾವಣೆಯಲ್ಲಿ ಸರ್ಕಾರಿ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ನ್ಯಾಯಮೂರ್ತಿ ಸಿನ್ಹಾ ಅವರು ಇಂದಿರಾ ಗಾಂಧಿ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದರು. ಅಲ್ಲದೆ ಗಾಂಧಿಯನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಿದರು. ಹೈಕೋರ್ಟ್ ತೀರ್ಪಿನ ಪ್ರಕಾರ ಇಂದಿರಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತೊರೆಯಬೇಕಾಗಿತ್ತು. ಪ್ರಧಾನ ಮಂತ್ರಿಯ ಅಧಿಕೃತ ನಿವಾಸವಾದ 1 ಸಫ್ದರ್ಜಂಗ್ ರಸ್ತೆಯಲ್ಲಿ ತುರ್ತು ಸಭೆ ಕರೆಯಲಾಯಿತು ಮತ್ತು ಇಂದಿರಾ ಗಾಂಧಿ ಎಲ್ಲ ಮುಖಂಡರಿಂದ ಸಲಹೆ ಪಡೆದರು.
ಸಂಜಯ್ ಗಾಂಧಿಯವರ ಸಲಹೆಯ ಮೇರೆಗೆ ಇಂದಿರಾ ಗಾಂಧಿ ಹೈಕೋರ್ಟ್ ಜೂನ್ 23 ರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು. ಜೂನ್ 24, 1975 ರಂದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ಈ ನಿರ್ಧಾರಕ್ಕೆ ಸಂಪೂರ್ಣ ತಡೆಯಾಜ್ಞೆ ನೀಡುವುದಿಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಈ ಆದೇಶ ಇಂದಿರಾಗಾಂಧಿ ಪ್ರಧಾನಿಯಾಗಿ ಉಳಿಯಲು ಅವಕಾಶ ನೀಡಿತು. ಆದರೆ ಅಂತಿಮ ತೀರ್ಪು ಬರುವವರೆಗೂ ಸಂಸದರಾಗಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಆದರೆ ಅದೇಕೋ ಇಂದಿರಾ ಗಾಂಧಿಗೆ ದೇಶದ ಹಿತಕ್ಕಿಂತ ತನ್ನ ಸ್ವಾರ್ಥನೆ ಮುಖ್ಯವಾಗಿತ್ತು. ತನ್ನ ಸ್ವಯಂ ಪ್ರತಿಷ್ಠೆಗೆ ಧಕ್ಕೆ ಆದಾಗ ತೋಚಿದ್ದು ಕಮ್ಯುನಿಸ್ಟ್ ದೇಶದ ದಬ್ಬಾಳಿಕೆ. ಯೋಚನೆ ಮಾಡದೇ ಜೂನ್ 25 ಮತ್ತು 26 ರ ಮಧ್ಯರಾತ್ರಿಯಲ್ಲಿ ತುರ್ತು ಪರಿಸ್ಥಿತಿಯನ್ನು ದೇಶಾದ್ಯಂತ ಹೇರಲಾಯಿತು. ಆದರೆ ಅದಕ್ಕೆ ಅಡಿಪಾಯವನ್ನು ಜೂನ್ 12, 1975 ರಂದು ಹಾಕಲಾಗಿತ್ತು ಅನ್ನುವುದು ಸುಳ್ಳಲ್ಲ.
ದೇಶಾದ್ಯಂತ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ಪ್ರಾರಂಭವಾದ ನಂತರ, ಇಂದಿರಾ ಗಾಂಧಿ ಅಂದಿನ ರಾಷ್ಟ್ರ ಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಮೇಲೆ ಒತ್ತಡ ಹೇರಿ ಜೂನ್ 25 ರ ಮಧ್ಯರಾತ್ರಿಯಲ್ಲಿ ತುರ್ತು ಘೋಷಣೆಗೆ ಸಹಿ ಮಾಡಿಸಿದರು. ಆಂತರಿಕ ಅಶಾಂತಿ ತುರ್ತು ಪರಿಸ್ಥಿತಿಯನ್ನು ಹೇರಲು ಹಿಂದಿನ ಕಾರಣವೆಂದು ಉಲ್ಲೇಖಿಸಲಾಗಿತ್ತು.
ಇದಾದ ನಂತರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಆರಂಭಿಸಿದ ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಮೊರಾರ್ಜಿ ದೇಸಾಯಿ ಸೇರಿದಂತೆ ಎಲ್ಲ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಯಿತು. ರೇಡಿಯೊದಲ್ಲಿ ಮಾತನಾಡಿದ್ದ ಇಂದಿರಾ ಗಾಂಧಿ, ದೇಶದ ಜನರ ವಿರುದ್ಧ ಪಿತೂರಿ ನಡೆಸಲಾಗಿದೆ. ಅದಕ್ಕಾಗಿಯೇ ಸರ್ಕಾರಕ್ಕೆ ತುರ್ತು ಪರಿಸ್ಥಿತಿ ಹೇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪತ್ರಿಕಾ ಸ್ವಾತಂತ್ರ‍್ಯವನ್ನು ಕಸಿದುಕೊಂಡ ನಂತರ, ಅನೇಕ ಹಿರಿಯ ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಯಿತು. ಆ ಸಮಯದಲ್ಲಿ, ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಪ್ರತಿಯೊಬ್ಬರೂ ಜೈಲಿನಲ್ಲಿರುವ ಮೂಲಕ ಶಿಕ್ಷೆಗೆ ಗುರಿಯಾದರು. ಈ ಅವಧಿಯಲ್ಲಿ ಸುಮಾರು 11 ಲಕ್ಷ ಕ್ಕೂ ಅಧಿಕ ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸುಮಾರು ಎರಡು ವರ್ಷದ ನಂತರ ಅಂದರೆ ಮಾರ್ಚ್ 21, 1977 ರಂದು ತುರ್ತು ಪರಿಸ್ಥಿತಿ ಕೊನೆಗೊಂಡಿತು.
ಸAವಿಧಾನವು ಮೂರು ರೀತಿಯ ತುರ್ತುಸ್ಥಿತಿಯನ್ನು ಉಲ್ಲೇಖಿಸುತ್ತದೆ. ಮೊದಲನೆಯದು ರಾಷ್ಟ್ರೀಯ ತುರ್ತುಸ್ಥಿತಿ, ಎರಡನೆಯದು ರಾಷ್ಟ್ರಪತಿಗಳ ನಿಯಮ ಮತ್ತು ಮೂರನೆಯದು ಆರ್ಥಿಕ ತುರ್ತುಸ್ಥಿತಿ. ರಾಷ್ಟ್ರಪತಿಗಳ ಅನುಮೋದನೆ ಇಲ್ಲದೆ ಮೂರೂ ತುರ್ತು ಪರಿಸ್ಥಿತಿಗಳನ್ನು ವಿಧಿಸಲಾಗುವುದಿಲ್ಲ. ಸಂಸತ್ತಿನ ಲಿಖಿತ ಪ್ರಸ್ತಾವನೆಯ ಮೇರೆಗೆ ರಾಷ್ಟ್ರಪತಿಗಳು ಈ ಅನುಮೋದನೆಯನ್ನು ನೀಡಬಹುದು.
ತುರ್ತು ಪರಿಸ್ಥಿತಿ ಜಾರಿಗೆ ಬಂದ ನಂತರ ಅದನ್ನು ಪ್ರತಿ ಸಂಸತ್ತಿನ ಸದನಗಳಲ್ಲಿ ಇಡಲಾಗುತ್ತದೆ, ಅದನ್ನು ಅಲ್ಲಿ ವಿರೋಧಿಸದಿದ್ದರೆ, ಅದನ್ನು ಆರು ತಿಂಗಳವರೆಗೆ ವಿಸ್ತರಿಸಲಾಗುತ್ತದೆ. 1975 ರಲ್ಲಿ ತುರ್ತು ಪರಿಸ್ಥಿತಿ 21 ತಿಂಗಳುಗಳ ಕಾಲ ನಡೆಯಿತು. ಅಂದರೆ, ಇದನ್ನು ಸುಮಾರು ನಾಲ್ಕು ಬಾರಿ ವಿಸ್ತರಿಸಲು ಅನುಮೋದಿಸಲಾಯಿತು. ಅಂದರೆ ಇಂದಿರಾ ಗಾಂಧಿಯ ಕಾಂಗ್ರೆಸ್ ಹಿಡಿತ ಯಾವ ಮಟ್ಟದಲಿಬೇರೂರಿತ್ತು ಅನ್ನುವುದಕ್ಕೆ ಬೇರೆ ಸಾಕ್ಷಿ ಬೇಕಾಗಿಲ್ಲ.
ತುರ್ತು ಪರಿಸ್ಥಿತಿ ಭಾರತದ ಮತ್ತು ಕಾಂಗ್ರೆಸ್ ಪಕ್ಷದ ಇತಿಹಾಸದ ಕರಾಳ ಅಧ್ಯಾಯವಾಗಿದೆ. ಆದರೆ ತನ್ನ ಸ್ವಾರ್ಥಕ್ಕೆ ಇಂದಿರಾಗಾಂಧಿ ದೇಶದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡದ್ದು ನಿಜಕ್ಕೂ ವಿಪರ್ಯಾಸ.