ಚೆನ್ನೈ ಟೆಸ್ಟ್ ಸೋಲು.. ನಾಲ್ಕನೇ ಸ್ಥಾನಕ್ಕೆ ಇಳಿದ ಟೀಮ್ ಇಂಡಿಯಾ, ಅಗ್ರ ಸ್ಥಾನಕ್ಕೇರಿದ ಇಂಗ್ಲೆಂಡ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದೆ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕೊಹ್ಲಿ ಪಡೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಆದ್ರೆ ಭರ್ಜರಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡ ಅಗ್ರ ಸ್ಥಾನಕ್ಕೇರಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶ ಮಾಡಬೇಕಾದ್ರೆ ಟೀಮ್ ಇಂಡಿಯಾ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕು. ಹಾಗೇ ಇಂಗ್ಲೆಂಡ್ ಗೂ ಗೆಲ್ಲಬೇಕಾದ ಅನಿವಾರ್ಯತೆ ಇದೆ.
ಹಾಗಂತ ಲೆಕ್ಕಚಾರಗಳು ಅಷ್ಟೊಂದು ಸುಲಭವಿಲ್ಲ. ಉಭಯ ತಂಡಗಳು ಮುಂದಿನ ಪಂದ್ಯದಲ್ಲಿ ಅಂಕಿ ಅಂಶಗಳ ಆಧಾರದ ಮೇಲೂ ಆಡಬೇಕಾಗುತ್ತದೆ.
ಮುಂದಿನ ಪಂದ್ಯಗಳು ಡ್ರಾ ಆದ್ರೆ ಅಥವಾ ಇಂಗ್ಲೆಂಡ್ 1-0, 2-1 ಅಥವಾ 2-0ರಿಂದ ಗೆದ್ರೆ ಫೈನಲ್ ಪ್ರವೇಶಿಸುತ್ತದೆ.
ಅದೇ ರೀತಿ ಟೀಮ್ ಇಂಡಿಯಾ 2-1ರಿಂದ ಅಥವಾ 3-1ರಿಂದ ಗೆದ್ರೆ ಫೈನಲ್ ಪ್ರವೇಶಿಸುತ್ತದೆ.
ಈಗಾಗಲೇ ನ್ಯೂಜಿಲೆಂಡ್ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಕೋವಿಡ್ ನಿಂದಾಗಿ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನ ಅಂಕಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಇಂಗ್ಲೆಂಡ್ ಆಡಿರುವ ಆರು ಸರಣಿಗಳಲ್ಲಿ 11 ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಹಾಗೇ ಮೂರು ಪಂದ್ಯಗಳು ಡ್ರಾಗೊಂಡಿವೆ. ಒಟ್ಟು 442 ಅಂಕಗಳೊಂದಿಗೆ 70.2 ಪರ್ಸೆಂಟ್ ಪಡೆದುಕೊಂಡಿದೆ.
ಇನ್ನು ನ್ಯೂಜಿಲೆಂಡ್ ಐದು ಸರಣಿಗಳಲ್ಲಿ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳನ್ನು ಸೋತಿದೆ. 420 ಅಂಕಗಳೊಂದಿಗೆ 70 ಪರ್ಸೆಂಟ್ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ.
ಹಾಗೇ ಆಸ್ಟ್ರೇಲಿಯಾ ನಾಲ್ಕು ಸರಣಿಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳನ್ನು ಸೋತಿದೆ. ಎರಡು ಪಂದ್ಯಗಳು ಡ್ರಾಗೊಂಡಿವೆ. ಒಟ್ಟು 332 ಅಂಕಗಳೊಂದಿಗೆ 69.2 ಪರ್ಸೆಂಟ್ ಪಡೆದಿದೆ.
ಇನ್ನೊಂದೆಡೆ ಟೀಮ್ ಇಂಡಿಯಾ ಆರು ಸರಣಿಗಳಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ನಾಲ್ಕು ಪಂದ್ಯಗಳನ್ನು ಸೋತಿದೆ. ಒಂದು ಪಂದ್ಯ ಡ್ರಾಗೊಂಡಿದೆ. 430 ಅಂಕಗಳೊಂದಿಗೆ 68.3 ಪರ್ಸೆಂಟ್ ಹೊಂದಿದೆ.
ಇನ್ನುಳಿದಂತೆ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾ ದೇಶ ತಂಡಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಸದ್ಯ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಲು ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.