ಇಂಗ್ಲೆಂಡ್ ಗೆ ಮುಳುವಾಗಿ ಹೋಯ್ತಾ ರೊಟೇಷನ್ ಪಾಲಿಸಿ..?
1 min read
ಇಂಗ್ಲೆಂಡ್ ಗೆ ಮುಳುವಾಗಿ ಹೋಯ್ತಾ ರೊಟೇಷನ್ ಪಾಲಿಸಿ..?
2021ರ ಆಂಗ್ಲೋ ಇಂಡಿಯನ್ ಟೆಸ್ಟ್ ಕ್ರಿಕೆಟ್ ವಾರ್ ನಲ್ಲಿ ಟೀಮ್ ಇಂಡಿಯಾ ಗೆದ್ದಿದೆ. ಮೊದಲ ಟೆಸ್ಟ್ ಪಂದ್ಯದ ಹೀನಾಯ ಸೋಲಿಕ ಬಳಿಕ ಎಚ್ಚೆತ್ತುಕೊಂಡ ಕೊಹ್ಲಿ ಬಳಗ ನಂತರದ ಮೂರು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ಗೂ ಲಗ್ಗೆ ಇಟ್ಟಿದೆ.
ಹಾಗೇ ನೋಡಿದ್ರೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುವುದು ನಿರೀಕ್ಷಿತವಾಗಿತ್ತು. ಆದ್ರೆ ಇಷ್ಟೊಂದು ಸುಲಭವಾಗಿ ಗೆಲ್ಲುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಐದು ದಿನಗಳ ಟೆಸ್ಟ್ ಪಂದ್ಯ ಎರಡು ಮೂರು ದಿನಗಳಲ್ಲಿ ಫಲಿತಾಂಶ ಕಾಣುತ್ತೆ ಅಂದ್ರೆ ಇಂಗ್ಲೆಂಡ್ ತಂಡ ವೀಕ್ ನೆಸ್ ಮತ್ತು ಟೀಮ್ ಇಂಡಿಯಾದ ಸ್ಟ್ರೇಂತ್ ಯಾವ ಮಟ್ಟದಲ್ಲಿತ್ತು ಎಂಬುದು ಗೊತ್ತಾಗಿಬಿಡುತ್ತೆ.
ಟೀಮ್ ಇಂಡಿಯಾದ ಯುವ ಆಟಗಾರರ ಅಬ್ಬರ, ಅನುಭವಿ ಆಟಗಾರರ ಅನುಭವ ಮತ್ತು ಲಯಬದ್ಧವಾದ ಬೌಲಿಂಗ್ ದಾಳಿಗೆ ಇಂಗ್ಲಿಷ್ ಬ್ಯಾಟ್ಸ್ ಮೆನ್ ಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎಂಬುದೇ ಗೊತ್ತಾಗಲಿಲ್ಲ.
ಈ ನಡುವೆ ಚೆನ್ನೈ ಮತ್ತು ಮೊಟೇರಾದ ಪಿಚ್ ಸರಿ ಇಲ್ಲ ಎಂಬ ಆರೋಪವನ್ನು ಇಂಗ್ಲೆಂಡ್ ಕ್ರಿಕೆಟ್ ಪಂಡಿತರು ಮಾಡಿದ್ದರು. ಅದೇನೋ ಅಂತರಲ್ಲ.. ಕುಣಿಯೋಕೆ ಬಾರದವ ಅಂಗಳ ಡೊಂಕು ಅಂತ. ಹಾಗೇ ಆರೋಪ ಮಾಡಿರುವ ಇಂಗ್ಲೆಂಡ್ ಕ್ರಿಕೆಟ್ ಪಂಡಿತರ ಸ್ಥಿತಿಯಾಗಿತ್ತು.
ಅಷ್ಟಕ್ಕೂ ಭಾರತದ ಪಿಚ್ ಗಳು ಸ್ಪಿನ್ ಬೌಲರ್ ಗಳಿಗೆ ಪೂರಕವಾಗಿರುತ್ತವೆ ಎಂಬುದ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಅದು ಗೊತ್ತಿದ್ದೂ ಅದಕ್ಕೆ ತಕ್ಕಂತೆ ಇಂಗ್ಲೆಂಡ್ ತಂಡದವರು ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಇರೋದು ಯಾರ ತಪ್ಪು ?
ನಿಜ, ಇಂಗ್ಲೆಂಡ್ ತಂಡ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಭಾರತ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಕೂಡ ಗೆದ್ದುಕೊಂಡಿತ್ತು.
ಜಾಯ್ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಇಂದು ವಿಶ್ವದ ಬಲಿಷ್ಠ ತಂಡಗಳನ್ನು ಸೋಲಿಸುವ ಸಾಮಥ್ರ್ಯವನ್ನು ಹೊಂದಿದೆ. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಭಾರತ ಪ್ರವಾಸಕ್ಕೆ ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಬೂಮ್ರಾ, ಇಶಾಂತ್ ಮತ್ತು ಅಶ್ವಿನ್ ಅವರ ಬೌಲಿಂಗ್ ವೈಖರಿ ಹೇಗೆ ಎದುರಿಸಬೇಕು ಎಂಬುದಕ್ಕೆ ಇಂಗ್ಲೆಂಡ್ ಸಿದ್ಧತೆ ಮಾಡಿಕೊಂಡಿತ್ತು. ಆದ್ರೆ ಅಕ್ಸರ್ ಪಟೇಲ್ ಅವರ ಸ್ಪಿನ್ ಜಾದೂ ಮತ್ತು ಮೊಹಮ್ಮದ್ ಸೀರಾಜ್ ಈ ಮಟ್ಟದಲ್ಲಿ ಕಟ್ಟಿ ಹಾಕುತ್ತಾರೆ ಅಂತ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳು ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಅದೇ ರೀತಿ ಟೀಮ್ ಇಂಡಿಯಾದ ಬ್ಯಾಟ್ಸ್ ಮೆನ್ ಗಳನ್ನು ಕೂಡ ಸರಿಯಾಗಿ ಅರಿತುಕೊಳ್ಳಲು ಇಂಗ್ಲೆಂಡ್ ಬೌಲರ್ ಗಳು ಎಡವಿದ್ರು.
ನಾಯಕ ಕೊಹ್ಲಿ, ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್, ಅಜಿಂಕ್ಯಾ ರಹಾನೆಯ ರನ್ ದಾಹಕ್ಕೆ ಕಡಿವಾಣ ಹಾಕಲು ಇಂಗ್ಲೀಷ್ ಬೌಲರ್ ಗಳು ಯಶಸ್ವಿಯಾದ್ರು.
ಆದ್ರೆ ರಿಷಬ್ ಪಂತ್ ಅವರ ಸಾಮಥ್ರ್ಯವನ್ನು ಸ್ವಲ್ಪ ಮಟ್ಟಿಗೆ ಲಘುವಾಗಿ ಪರಿಗಣಿಸಿರುವುದಕ್ಕೆ ತಕ್ಕ ದಂಡವನ್ನು ತೆರಬೇಕಾಯ್ತು. ಜೊತೆಗೆ ವಾಷಿಂಗ್ಟನ್ ಸುಂದರ್ , ಆರ್. ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಅವರ ಸಮಯೋಚಿತ ಆಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್ ನ ವೇಗದ ಬೌಲರ್ ಗಳು ಹಾಗೂ ಸ್ಪಿನ್ ಬೌಲರ್ ಗಳು ಕೂಡ ವಿಫಲರಾದ್ರು. ಇನ್ನೊಂದೆಡೆ ರೋಹಿತ್ ಶರ್ಮಾ ಫಾರ್ಮ್ ಕಂಡುಕೊಂಡಿರುವುದು ಕೂಡ ಇಂಗ್ಲೆಂಡ್ ತಂಡಕ್ಕೆ ಆಘಾತವನ್ನೇ ನೀಡಿದೆ.
ಅದ್ರಲ್ಲೂ ಇಡೀ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಕಾಡಿದ್ದು ರಿಷಬ್ ಪಂತ್, ಅಕ್ಸರ್ ಪಟೇಲ್, ಅಶ್ವಿನ್, ವಾಷಿಂಗ್ಟನ್ ಸುಂದರ್ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಇನ್ನೊಂದೆಡೆ ಇಂಗ್ಲೆಂಡ್ ತಂಡ ತನ್ನ ಕೆಲವೊಂದು ತಪ್ಪು ನಿರ್ಧಾರಗಳಿಂದ ಭಾರತದಲ್ಲಿ ಮುಖಭಂಗ ಅನುಭವಿಸಿತ್ತು. ರೊಟೇಷನ್ ಪಾಲಿಸಿ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿ ಪರಿಣಮಿಸಿತ್ತು.
ಪ್ರತಿ ಪಂದ್ಯದಲ್ಲೂ ಬದಲಾವಣೆ ಮಾಡಿಕೊಂಡಿರುವ ಇಂಗ್ಲೆಂಡ್ ಟೀಮ್ ಮ್ಯಾನೇಜ್ ಮೆಂಟ್ ಆಟಗಾರರಲ್ಲಿ ಗೊಂದಲವನ್ನೂ ಮೂಡಿಸಿತ್ತು.
ಅಷ್ಟೇ ಅಲ್ಲ, ತಂಡ ನಾಯಕ ಜಾಯ್ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಹೆಚ್ಚು ಅವಲಂಬಿತವಾಗಿತ್ತು. ಇನ್ನುಳಿದಂತೆ ಇಂಗ್ಲೆಂಡ್ ನ ಬ್ಯಾಟ್ಸ್ ಮೆನ್ ಗಳು ತಾಳ್ಮೆಯಿಂದ ಆಡುವ ಮನಸನ್ನೇ ಮಾಡಲಿಲ್ಲ. ಸ್ಪಿನ್ ಬೌಲರ್ ಗಳ ಎದುರು ರನ್ ಗಳಿಸಲು ಪರದಾಟ ನಡೆಸಿದ್ರು. ಕ್ರೀಸ್ ನಲ್ಲಿ ನೆಲಕಚ್ಚಿ ನಿಂತು ಆಡಲು ಟೀಮ್ ಇಂಡಿಯಾ ಬೌಲರ್ ಗಳು ಬಿಡಲಿಲ್ಲ.
ಒಟ್ಟಿನಲ್ಲಿ ಸರಣಿ ಯಾವುದೇ ಆಗಿರಲಿ, ಪಿಚ್ ಯಾವುದೇ ಇರಲಿ, ಪಿಚ್ ಹೇಗೆ ಬೇಕಾದ್ರೂ ವರ್ತಿಸಲಿ, ಪಂದ್ಯ ಆಡುವುದಕ್ಕಿಂತ ಮುನ್ನ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಲೇಬೇಕು. ಅದಕ್ಕೆ ತಕ್ಕಂತೆ ತಯಾರಿಯನ್ನು ಕೂಡ ಮಾಡಲೇಬೇಕಿದೆ. ಇಲ್ಲದಿದ್ರೆ ಒಮ್ಮೊಮ್ಮೆ ಹೀಗೂ ಆಗುತ್ತೆ..!