ದ.ಕ.ದಲ್ಲಿ ಇಂದು 10 ವೈದ್ಯರು ಸೇರಿ 41ಮಂದಿಗೆ ಕೊರೊನಾ – ಲೇಡಿಗೋಶನ್ ಆಸ್ಪತ್ರೆಯಲ್ಲಿ ಜುಲೈ 5ರವರೆಗೆ ದಾಖಲಾತಿ ಸ್ಥಗಿತ
ಮಂಗಳೂರು, ಜೂನ್ 30: ಮಂಗಳೂರಿನಲ್ಲಿ ಇಂದು 10 ವೈದ್ಯರಿಗೆ ಕೊರೋನ ಸೋಂಕು ಪತ್ತೆಯಾಗಿದೆ. ಮಂಗಳೂರಿನ ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯರು ಸೇರಿ ಕೋವಿಡ್ ಆಸ್ಪತ್ರೆಯ ಹಲವು ವೈದ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಆಸ್ಪತ್ರೆಯಲ್ಲಿನ ಹೆಚ್ಚಿನ ವೈದ್ಯರು, ಸಿಬ್ಬಂದಿಗಳು ಕ್ವಾರಂಟೈನ್ ಗೆ ಒಳಗಾಗಿರುವ ಹಿನ್ನಲೆಯಲ್ಲಿ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 30ರಿಂದ ಜುಲೈ 5ರವರೆಗೆ ಹೊರರೋಗಿ ಹಾಗೂ ಒಳರೋಗಿಗಳ ದಾಖಲಾತಿ ಸೇವೆಯನ್ನು ಸ್ಥಗಿತಗೊಳ್ಳಿಸಲಾಗಿದೆ.
ಅಲ್ಲದೇ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಫ್ಯೂಮಿಗೇಶನ್ ಹಾಗೂ ಸ್ಯಾನಿಟೈಝೇಶನ್ ಮಾಡುವ ಅಗತ್ಯವಿರುವ ಕಾರಣ ರೋಗಿಗಳಿಗೆ ಮುಂದಿನ ಚಿಕಿತ್ಸೆಗಾಗಿ ‘ಎಕೆ-ಎಆರ್‌ಕೆ’ ಯೋಜನೆಯಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸಲು ಶಿಫಾರಸು ಪತ್ರ ನೀಡಲು ನಿರ್ಧರಿಸಲಾಗಿದೆ.
ಜುಲೈ 6ರಿಂದ ಆಸ್ಪತ್ರೆಯು ಎಂದಿನಂತೆಯೇ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಲೇಡಿಗೋಶನ್ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಡಾ. ಶಕುಂತಲಾ ಎಂ. ಅವರನ್ನು ಸಂಪರ್ಕಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 2424001ನ್ನು (ಹೆಲ್ಪ್ ಡೆಸ್ಕ್) ಸಂಪರ್ಕಿಸಲು ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ತಿಳಿಸಿದ್ದಾರೆ.
ಈ ನಡುವೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.