ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದ್ದು, ಶೇ. 73.40ರಷ್ಟು ಫಲಿತಾಂಶವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕರ್ನಾಟಕ (Karnataka) ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ತೇರ್ಗಡೆ ಹೊಂದಿದ್ದಾರೆ.
ಶೇ. 94 ಫಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನದಲ್ಲಿದೆ. ಶೇ. 92.12 ನೊಂದಿಗೆ ದಕ್ಷಿಣ ಕನ್ನಡ ಹಾಗೂ ಶೇ. 88.67 ನೊಂದಿಗೆ ಶಿವಮೊಗ್ಗ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಯಾದಗಿರಿ ಶೇ. 50.59% ರೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಹೀಗಾಗಿ ಫಲಿತಾಂಶದಲ್ಲಿ ಕುಸಿತ ಕಂಡಿದೆ. 2022-23ನೇ ಸಾಲಿನಲ್ಲಿ ಶೇ. 83.89 ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ, ಈ ಬಾರಿ ಶೇ. 73.40ರಷ್ಟು ಫಲಿತಾಂಶ ದಾಖಲಾಗಿದೆ. ಈ ಬಾರಿ ಕೂಡ ಹಲವು ಶಾಲೆಗಳು ಶೇ. 100ರಷ್ಟು ಫಲಿತಾಂಶ ಮಾಡಿವೆ. ಸರ್ಕಾರಿ – 785, ಅನುದಾನ – 206, ಖಾಸಗಿ ಶಾಲೆ – 1297 ಸೇರಿದಂತೆ ಒಟ್ಟು – 2288 ಶಾಲೆಗಳು ಶೇ. 100ರಷ್ಟು ಫಲಿತಾಂಶ ಸಾಧಿಸಿವೆ. ಸರ್ಕಾರಿ – 3, ಅನುದಾನ – 13, ಖಾಸಗಿ – 62 ಸೇರಿದಂತೆ ಒಟ್ಟು 78 ಶಾಲೆಗಳು ಶೂನ್ಯ ಸಾಧನೆ ಮಾಡಿವೆ.