ಭೋಪಾಲ್: ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಸೇತುವೆಯಿಂದ ಎಸೆದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಪಾಪಿಗಳು 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಸೇತುವೆ ಮೇಲಿಂದ ಎಸೆದಿದ್ದಾರೆ. ಕೂಡಲೇ ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತನಿಖಾಧಿಕಾರಿ ಯಶವಂತ್ ಗೋಯಲ್ ಹೇಳಿದ್ದಾರೆ.
ಬಾಲಕಿಗೆ ಪ್ರಜ್ಞೆ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಾಲಕಿ ಕೋಚಿಂಗ್ ಗೆ ತೆರಳಿದ್ದಾಗ ಇಬ್ಬರು ಅಪಹರಿಸಿ, ಅತ್ಯಾಚಾರ ಎಸಗಿ ಕ್ರೂರವಾಗಿ ಥಳಿಸಿದ್ದಾರೆ. ನಂತರ ಸೇತುವೆಯಿಂದ ಎಸೆದಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ ಎನ್ನಲಾಗಿದೆ.
ಆರೋಪಿಗಳ ಗುರುತು ಪತ್ತೆಯಾಗಿದ್ದು, ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸಲು ವಿಶೇಷ ಘಟಕ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.