ಯೂರೋ ಕಪ್ 2021 – ಹಾಲಿ ಚಾಂಪಿಯನ್ ಪೋರ್ಚ್‍ಗಲ್ ಗೆ ಮುಖಭಂಗ.. ಟೂನಿಯಿಂದ ಹೊರಬಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಬಳಗ..!
ಯುರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಪೋರ್ಚ್‍ಗಲ್ ತಂಡ ಆಘಾತ ಅನುಭವಿಸಿದೆ. ಬೆಲ್ಜಿಯಂ ವಿರುದ್ಧ 1-0 ಗೋಲುಗಳಿಂದ ಸೋತು ಹೋದ ಪೋರ್ಚ್ ಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಬೆಲ್ಜಿಯಂ ತಂಡದ ಪರ ಥೋರ್ಗಾನ್ ಹಾಝರ್ಡ್ ಅವರು ಪಂದ್ಯದ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರು. ಇದರೊಂದಿಗೆ ಹಾಲಿ ಚಾಂಪಿಯನ್ ಪೋರ್ಚ್‍ಗಲ್ ತಂಡ ಈ ಬಾರಿ ಪ್ರೀ ಕ್ವಾರ್ಟರ್ ಫೈನಲ್ ನಲ್ಲೇ ನಿರಾಸೆ ಅನುಭವಿಸಿದೆ. ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ.
ಬೆಲ್ಜಿಯಂ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಇಟಲಿ ತಂಡವನ್ನು ಎದುರಿಸಲಿದೆ.
ಇನ್ನುಳಿದಂತೆ ಇಟಲಿ ಮತ್ತು ಚೆಕ್ ಗಣರಾಜ್ಯ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಈಗಾಗಲೇ ಮೊದಲ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ 4-0 ಗೋಲುಗಳಿಂದ ವೇಲ್ಸ್ ತಂಡವನ್ನು ಮಣಿಸಿ ಎಂಟರ ಘಟ್ಟವನ್ನು ಖಚಿತಪಡಿಸಿಕೊಂಡಿತ್ತು.
ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಟಲಿ ತಂಡ 2-1 ಗೋಲುಗಳಿಂದ ಆಸ್ಟ್ರೀಯಾ ತಂಡವನ್ನು ಮಣಿಸಿದೆ. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಗೋಲು ರಹಿತವಾಗಿ ಸಮಬಲ ಸಾಧಿಸಿದ್ದವು. ನಂತರ ಹೆಚ್ಚುವರಿ ಅವಧಿಯಲ್ಲಿ ಇಟಲಿ ತಂಡದ ಪರ ಫೆಡ್ರಿಕ್ ಚಿಸಾ 95ನೇ ನಿಮಿಷದಲ್ಲಿ ಮತ್ತು ಮ್ಯಾಟೊ ಪೆಸಿನ್ 105ನೇ ನಿಮಿಷದಲ್ಲಿ ಗೊಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು. ಆಸ್ಟ್ರೀಯಾ ತಂಡದಿಂದ ಸಾಸಾ ಕಾಲಾಡ್ಜೆಕ್ ಅವರು 114ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದ್ರು.
ಇನ್ನೊಂದು ಪಂದ್ಯದಲ್ಲಿ ಚೆಕ್ ಗಣರಾಜ್ಯ ತಂಡ 2-0 ಗೋಲುಗಳಿಂದ ನೆದರ್ಲೆಂಡ್ ತಂಡವನ್ನು ಸೋಲಿಸಿತು. ಚೆಕ್ ಗಣರಾಜ್ಯದ ಪರ ಥಾಮಸ್ ಹೊಲ್ಸ್ ಮತ್ತು ಪ್ಯಾಟ್ರಿಕ್ ಸ್ಟಿಕ್ ಅವರು ಗೋಲು ದಾಖಲಿಸಿದ್ರು.