ಯೂರೋ ಕಪ್ ಸೆಮಿಫೈನಲ್ – ಇಟಲಿ -ಸ್ಪೇನ್ ಜಿದ್ದಾಜಿದ್ದಿನ ಹೋರಾಟ.. ಇಂಗ್ಲೆಂಡ್ ಗೆ ಡೆನ್ಮಾರ್ಕ್ ಸವಾಲ್..!
2021ರ ಯೂರೋ ಕಪ್ ಟೂರ್ನಿಯು ಅಂತಿಮ ಹಂತ ತಲುಪಿದೆ. ಯಾರು ಪ್ರಶಸ್ತಿ ಗೆಲ್ಲುತ್ತಾರೆ ಅನ್ನೋ ಕುತೂಹಲ ಈಗ ಜಾಸ್ತಿಯಾಗಿದೆ.
ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಟಲಿ ಮತ್ತು ಸ್ಪೇನ್ ತಂಡಗಳು ಹೋರಾಟ ನಡೆಸಲಿವೆ. ಇನ್ನೊಂದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳು ಮುಖಾಮುಖಿಯಾಗಲಿವೆ.
ಈಗಾಗಲೇ ಟೂರ್ನಿಯ ನೆಚ್ಚಿನ ತಂಡಗಳಾದ ಬೆಲ್ಜಿಯಂ, ಪೋರ್ಚ್‍ಗಲ್ ಮತ್ತು ಜರ್ಮನಿ ತಂಡಗಳು ನಿರಾಸೆ ಅನುಭವಿಸಿವೆ. ಹಾಲಿ ಚಾಂಪಿಯನ್ ಆಗಿರುವ ಪೋರ್ಚ್‍ಗಲ್ ತಂಡ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋತು ನಿರಾಸೆ ಅನುಭವಿಸಿದೆ.
ಬಲಿಷ್ಠ ಸ್ಪೇನ್ ತಂಡ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕ್ರೊವೇಶಿಯಾ ತಂಡವನ್ನು ಸೋಲಿಸಿದ್ರೆ, ಕ್ವಾರ್ಟರ್ ಫೈನಲ್ ನಲ್ಲಿ ಸ್ವಿಜರ್ ಲೆಂಡ್ ತಂಡವನ್ನು ಮಣಿಸಿದೆ.
ಅದೇ ರೀತಿ ಇಟಲಿ ತಂಡ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೀಯಾ ಮತ್ತು ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ ವನ್ ತಂಡವಾಗಿರುವ ಬೆಲ್ಜಿಯಂ ತಂಡವನ್ನು ಮನೆಗೆ ಕಳುಹಿಸಿ ಇದೀಗ ಸೆಮಿಫೈನಲ್ ಗೆ ಎಂಟ್ರಿಯಾಗಿದೆ.
ಇನ್ನು ಇಂಗ್ಲೆಂಡ್.. ಈ ಬಾರಿಯ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡಿದೆ. ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಇಂಗ್ಲೆಂಡ್ ಜರ್ಮನಿ ತಂಡವನ್ನು ಮಣಿಸಿದ್ರೆ, ಕ್ವಾರ್ಟರ್ ಫೈನಲ್ ನಲ್ಲಿ ಉಕ್ರೇನ್ ತಂಡದ ವಿರುದ್ಧ ಸುಲಭ ಗೆಲುವನ್ನು ದಾಖಲಿಸಿ ಸೆಮೀಸ್ ಗೆ ಎಂಟ್ರಿಯಾಗಿದೆ.
ಇನ್ನೊಂದೆಡೆ ಡೆನ್ಮಾರ್ಕ್ ತಂಡ. ಯಾರು ನಿರೀಕ್ಷಿಸದ ರೀತಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ತಂಡ. ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ತಂಡ ವೇಲ್ಸ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿತ್ತು. ಹಾಗೇ ಕ್ವಾರ್ಟರ್ ಫೈನಲ್ ನಲ್ಲಿ ಚೆಕ್ ಗಣರಾಜ್ಯ ತಂಡವನ್ನು 2-1ಗೋಲುಗಳಿಂದ ಪರಾಭವಗೊಳಿಸಿತು.
ಇದೀಗ ಪ್ರಶಸ್ತಿಗಾಗಿ ಮೂರು ಪಂದ್ಯಗಳನ್ನು ಎದುರುನೋಡಬೇಕಾಗಿದೆ. ಇಂಗ್ಲೆಂಡ್, ಡೆನ್ಮಾರ್ಕ್, ಸ್ಪೇನ್, ಇಟಲಿ ಯಾರು ಕಪ್ ಗೆಲ್ತಾರೆ ಅನ್ನೋ ಕುತೂಹಲ ಫುಟ್ ಬಾಲ್ ಅಭಿಮಾನಿಗಳದ್ದು.