ಬೆಂಗಳೂರು: ವಿದೇಶದಿಂದಲೇ ವಿಡಿಯೋ ಮಾಡಿ ಹರಿಬಿಟ್ಟು ಪ್ರಜ್ವಲ್ ರೇವಣ್ಣ ಕರ್ನಾಟಕಕ್ಕೆ ಮರಳಿ ಬರುತ್ತೇನೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಭವಾನಿ ರೇವಣ್ಣ ಅವರಿಗೆ ಸಂಕಷ್ಟ ಶುರುವಾಗಿದೆ.
ಕೆ.ಆರ್.ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ (kidnap case) ಈಗಾಗಲೇ ಜಾಮೀನನ ಮೇಲೆ ಶಾಸಕ ಎಚ್.ಡಿ. ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪತ್ನಿ ಭವಾನಿ ರೇವಣ್ಣ(Bhavani Revanna) ಗೆ ಬಂಧನ ಭೀತಿ ಆರಂಭವಾಗಿದೆ. ಹೀಗಾಗಿಯೇ ಭವಾನಿ ರೇವಣ್ಣ ಮುಂಜಾಗೃತವಾಗಿ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅಪಹರಣ ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ ಆರೋಪ ಭವಾನಿ ರೇವಣ್ಣ ಮೇಲೆ ಇದೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ, ಆತನ ಮೊಬೈಲ್ ವಶಕ್ಕೆ ಪಡೆದು ಕಾಲ್ ಡೀಟೆಲ್ಸ್ ಸಹ ಪರಿಶೀಲನೆ ಮಾಡಿತ್ತು. ಈ ವೇಳೆ ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಕರೆ ಮಾಡಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಭವಾನಿ ರೇವಣ್ಣಗೆ ಆತಂಕ ಶುರುವಾಗಿದೆ. ಹೀಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.