ಕಾಂಗ್ರೆಸ್ ಶಾಸಕ ರಾಜು ಕಾಗೆ ತಮ್ಮ ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿದರೂ, ನನಗೆ ಬೇಡ ಎಂದು ಅವರು ಹೇಳಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ಅವರ ಈ ನಿಲುವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜು ಕಾಗೆ, ನಾನು ಜನರ ಸಲುವಾಗಿ ರಾಜಕಾರಣ ಮಾಡ್ತೀನಿ, ಹೋರಾಟ ಮಾಡ್ತೀನಿ. ಹುದ್ದೆಗಾಗಿ ನಾನು ಈ ಕ್ಷೇತ್ರದಲ್ಲಿಲ್ಲ. ನನ್ನ ಅಸಮಾಧನವನ್ನ ನಾನು ಖಂಡಿತವಾಗಿಯೂ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಒಂದು ಕಾರ್ಯಕ್ರಮ ಇದ್ದ ಕಾರಣ ಸುರ್ಜೇವಾಲ ಅವರನ್ನು ಭೇಟಿಯಾಗಲಾಗಿಲ್ಲ. ಆದರೆ ಇಂದು ಬೆಳಿಗ್ಗೆ 11 ಗಂಟೆಗೆ ಭೇಟಿಯಾಗ್ತೀನಿ. ಅವರು ಸಚಿವ ಸ್ಥಾನ ಕೊಡುತ್ತೀನಿ ಅಂದ್ರೂ ನನಗೆ ಬೇಡ. ನನಗೆ ಅದ್ರಲ್ಲಿ ಆಸೆ ಇಲ್ಲ, ಎಂದು ಹೇಳಿದರು.
ರಾಜು ಕಾಗೆಯ ಈ ಹೇಳಿಕೆಯಿಂದ, ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬೆಳಕಿಗೆ ಬರುತ್ತಿವೆ. ಶಾಸಕರ ಅಸಮಾಧಾನ, ಕ್ಷೇತ್ರದ ಕಾರ್ಯಕರ್ತರ ಒತ್ತಡ, ಹಾಗೂ ಹೈಕಮಾಂಡ್ ನಿರ್ಧಾರಗಳ ನಡುವೆ ರಾಜು ಕಾಗೆಯಂತಹ ಶಾಸಕರು ತಮ್ಮ ನಿಲುವನ್ನು ಮುಕ್ತವಾಗಿ ಪ್ರಸ್ತಾಪಿಸುತ್ತಿರುವುದು ಗಮನಾರ್ಹವಾಗಿದೆ.








