ತುಮಕೂರು: ಮೇ 3ರ ಲಾಕ್ ಡೌನ್ ಮುಗಿದ ನಂತರ ವಿದ್ಯಾರ್ಥಿಗಳಿಗೆ ಸಮಯ ನೀಡಿ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುರೇಶ್ ಕುಮಾರ್ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ನಡೆಸುವ ಮೊದಲು ಪುನರ್ ಮನನ ತರಗತಿಗಳನ್ನು ಮಾಡಲಾಗುವುದು, ಜೊತೆಗೆ ದೂರದರ್ಶನದಲ್ಲಿ ಎಸೆಸೆಲ್ಸಿ ಮಕ್ಕಳಿಗೆ ಪಾಠ ನಡೆಸಲು ತೀರ್ಮಾನ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬರುವ ವದಂತಿಗಳಿಂದ ಯಾರು ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಇದೇ ವೇಳೆ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಿಸುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ, ಈಗಾಗ್ಲೇ ಕೇಂದ್ರ ಸರಕಾರ ಇದಕ್ಕೆ ಸೂಚನೆಗಳನ್ನು ನೀಡಿದೆ. ಮುಂದಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಶಾಲೆಗಳ ಪ್ರವೇಶ ಶುಲ್ಕ ತೆಗೆದುಕೊಳ್ಳಬಾರದು ಎಂದು ಕೆಲ ರಾಜ್ಯಗಳು ಆದೇಶ ಹೊರಡಿಸಿವೆ. ಆ ವಿಚಾರದ ಬಗ್ಗೆಯೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.








