ಮಹಿಳೆಯರಿಗೆ ಸೀರೆ ಅಂದರೆ ಅಚ್ಚುಮೆಚ್ಚು. ಅದರಲ್ಲಿಯೂ ಡಿಸ್ಕೌಂಟ್ ನಲ್ಲಿ ಮಾರಾಟ ಮಾಡುತ್ತಾರೆ ಎಂದರಂತೂ ಮುಗಿದೇ ಹೋಯಿತು. ಹೀಗೆ ಡಿಸ್ಕೌಂಟ್ ನಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟವಾಗುತ್ತಿರುವ ಸುದ್ದಿ ಕೇಳಿದ ಮಹಿಳೆಯರು ಅಲ್ಲಿಗೆ ಹಿಂಡು ಹಿಂಡಾಗಿ ತೆರಳಿದ್ದಾರೆ. ಆಗ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿರುವ (Malleshwaram) ಕೆನರಾ ಯೂನಿಯನ್ ಹಾಲ್ನಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಅಂದರೆ, ವಾರ್ಷಿಕವಾಗಿ ಸೆಕೆಂಡ್ಸ್ ಸೇಲ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿತ್ತು (annual discount sale).
ರಜಾ ದಿನವಾದ್ದರಿಂದ ಭಾರೀ ಸಂಖ್ಯೆಯಲ್ಲಿ ಮಲ್ಲೇಶ್ವರದತ್ತ ಧಾವಿಸಿ, ಕೆನರಾ ಹಾಲ್ ಗೆ ಮಹಿಳೆಯರು ತೆರಳಿದ್ದಾರೆ. ಹಿಂಡುಹಿಂಡಾಗಿ ಬಂದ ಹೆಂಗೆಳೆಯರು ನಾಮುಂದು ತಾಮುಂದು ಎಂದು ಸೀರೆಗಳನ್ನು ಬಾಚಿಕೊಳ್ಳಲು ಮುಂದಾಗಿದ್ದಾರೆ. ಸಂದರ್ಭದಲ್ಲಿ ಮಹಿಳೆಯರ ಮಧ್ಯೆ ಜಗಳ ನಡೆದು, ಇಬ್ಬರು ಮಹಿಳೆಯರು ಸೀದಾ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಎಳೆದಾಡಿ ಕೆಳಗೆ ಬೀಳುವ ಹಂತಕ್ಕೂ ಅವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ಮಧ್ಯೆ ಸ್ಥಳಲ್ಲಿದ್ದ ಸೆಕ್ಯುರಿಟಿಯವರೂ ಜಗಳ ಬಿಡಿಸಲು ಧಾವಿಸಿದ್ದಾರೆ. ಆದರೆ ಫೈಟ್ ಜೋರಾಗಿದ್ದ ಕಾರಣ ಮೂಕ ಪ್ರೇಕ್ಷಕರಾಗಿದ್ದಾರೆ.
ಆಶ್ಚರ್ಯವೆಂದರೆ ಇದನ್ನೆಲ್ಲಾ ಮೂಕವಿಸ್ಮಿತರಾಗಿ ಇತರೆ ಹೆಂಗಸರು ನೋಡಿದ್ದಾರೆಯೇ ವಿನಃ ಜಗಳ ಬಿಡಿಸಲು ಯಾರೂ ಮುಂದಾಗಿಲ್ಲ.