ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು. ಈ ಬಾರಿಯೂ ನಮ್ಮ ಭವಿಷ್ಯವೇ ನಿಜವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ನಡೆಸುವ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ದಾಟಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 85 ಸ್ಥಾನ ಮಾತ್ರ ಕೊಟ್ಟಿದ್ದರು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ. ಜೊತೆಗೆ ನಾನು ನಡೆಸಿದ್ದ ಖಾಸಗಿ ಸಮೀಕ್ಷೆ ಪ್ರಕಾರದಂತೆ ಜನ ನಮಗೆ 136 ಸ್ಥಾನ ನೀಡಿದರು ಎಂದು ಹೇಳಿದ್ದಾರೆ.
ಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ನಂಬಿಕೆ ಬಂದಿದೆ. ಇವು ನಮ್ಮ ಕೈ ಹಿಡಿಯಲಿವೆ. ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಎಐಸಿಸಿ ನೀಡಿದ ಗ್ಯಾರಂಟಿಗಳ ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿವೆ. ಗ್ಯಾರಂಟಿಗಳು ದೇಶದ ಜನರ ಮನಸ್ಸು ಗೆದ್ದಿವೆ ಎಂದು ಹೇಳಿದ್ದಾರೆ.