ಕೆಎಸ್ ಆರ್ ಟಿಸಿಗೆ ಕೆಪಿಸಿಸಿ ನೀಡಿದ ಚೆಕ್ ನಕಲಿ ಎಂಬ ಆರ್. ಅಶೋಕ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಿನ್ನೆ ವಿಧಾನಸೌಧದ ಬಳಿ ಆರ್ ಅಶೋಕ್ ಮಾತನಾಡಿ, “ಕಾಂಗ್ರೆಸ್ ಅಧ್ಯಕ್ಷರು ಕೆಎಸ್‌ಆರ್‌ಟಿಸಿಗೆ ನೀಡಲು ಮುಂದಾಗಿರುವ ಚೆಕ್ ಮೇಲೆ ಡಿ.ಕೆ. ಶಿವಕುಮಾರ್ ಸಹಿ ಇಲ್ಲ. ಬದಲಿಗೆ ದಿನೇಶ್ ಗುಂಡೂರಾವ್ ಸಹಿ ಇದೆ. ಚೆಕ್ ಮೇಲೆ ಡಿ.ಕೆ ಶಿವಕುಮಾರ್ ಸಹಿ ಇಲ್ಲ ಅಂದ್ಮೇಲೆ ಚೆಕ್ ಕೂಡ ನಕಲಿಯೇ. ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಒಳಜಗಳ ಏನಿದೆಯೋ ಗೊತ್ತಿಲ್ಲ, ಅಥವಾ ಇವರಿಗೆ ಅಕೌಂಟ್ ಚೇಂಜ್ ಮಾಡುವ ಜ್ಞಾನವೇ ಇಲ್ಲ. ಇಂಥವರು ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸಚಿವ ಆರ್. ಅಶೋಕ್ ರ ಈ ಹೇಳಿಕೆಗೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕಣ್ಣ ನಮ್ಮ ಚೆಕ್ ನಕಲಿ ಅಂತ ಆರೋಪ ಮಾಡಿದ್ದಾರೆ. ನಮ್ಮ ಪಕ್ಷ ಹಾಗೂ ನಮ್ಮ ಮುಖಂಡರ ಹಿನ್ನೆಲೆ ನೋಡಿ ಅವರು ಮಾತನಾಡಬೇಕು. ಚೆಕ್ ಮೇಲೆ ನನ್ನ ಸಹಿ ಇಲ್ಲ. ದಿನೇಶ್ ಗುಂಡೂರಾವ್ ಸಹಿ ಇದೆ ಅಂತಾರೆ. ಅದು ನಮ್ಮ ಪಕ್ಷದ ವಿಚಾರ. ಅಷ್ಟಕ್ಕೆ ಚೆಕ್ ನಕಲಿ ಅನ್ನೋದು ಸರಿಯೇ..? ಹಣ ಕೊಡುವುದೇ ಆದ್ರೆ ನೂರು ಕೋಟಿ ಕೊಡಲಿ ಅಂತಾ ಸವಾಲು ಹಾಕ್ತಾರೆ. ಅಶೋಕ್ ನಮಗೆ ಬೆಲೆ ಕಟ್ತಿದ್ದಾರೆ. ಆದ್ರೆ ನಾವು ಹಾಗೆ ಬೆಲೆ ಕಟ್ಟಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ.