ಹೆಮ್ಮಾರಿ ಕೊರೊನಾ ಸೋಂಕಿನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಅಸಹಾಯಕರು, ಕೂಲಿಕಾರ್ಮಿಕರು, ವಿಕಲ ಚೇತನರು ಸೇರಿದಂತೆ ಅನೇಕರು ಊಟ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹವರಿಗೆ ಸಹಾಯ ಮಾಡಲು ಅನೇಕರು ಮುಂದೆ ಬಂದಿದ್ದಾರೆ. ಅದರಂತೆ ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿಗಳು ಮುಂದೆ ನಿಂತು ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳು ಸರ್ಕಾರದ ನಿಯಮವನ್ನು ಉಲ್ಲಂಘಿಸದೆ, ಸುದೀಪ್ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಜನರಿಗೆ ಆಹಾರವನ್ನು ವಿತರಣೆ ಮಾಡುತ್ತಿದ್ದಾರೆ.
ಪ್ಯಾಕೇಟ್ ಗಳಲ್ಲಿ ಆಹಾರವನ್ನು ತಂದು ಒಂದುಹೊತ್ತು ಊಟಕ್ಕೂ ಪರದಾಡುತ್ತಿರುವವರಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಜೆ.ಜೆ ನಗರ, ಬ್ಯಾಟರಾಯನ ಪುರ, ಗೋರಿಪಾಳ್ಯ, ಬಂಗಾರಪ್ಪ ನಗರ ಸೇರಿದಂತೆ ಅನೇಕ ಕಡೆ ಕಿಚ್ಚನ ಅಭಿಮಾನಿಗಳು ಬಡವರ ಹಸಿವನ್ನು ನೀಗಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಮಾಡಲಿದ್ದಾರೆ.








