ಬೆಳಗಾವಿ: ಮೊದಲೇ ಬರದಿಂದಾಗಿ ತತ್ತರಿಸಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡು ಮತ್ತಷ್ಟು ಸಂಕಷ್ಟ ತಂದೊಡ್ಡಿವೆ.
ಕಳೆದ ಬಾರಿ ಸರಿಯಾಗಿ ಮಳೆಯಾಗಿಲ್ಲ. ಹೀಗಾಗಿ ಇಳುವರಿ ಸರಿಯಾಗಿಲ್ಲ ಬಂದಿರಲಿಲ್ಲ. ಆದರೂ ಸಂಕಷ್ಟದಲ್ಲಿರುವ ರೈತರಿಗೆ ಕಾರ್ಖಾನೆಗಳು ಗಾಯದ ಮೇಲೆ ಬರೆ ಎಳೆದಿದ್ದು, ಒಟ್ಟು 395 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಮಾರ್ಚ್ ನಲ್ಲಿ ಎಲ್ಲ ಕಾರ್ಖಾನೆಗಳು ಹಂಗಾಮು ಮುಗಿಸಿವೆ. ರೈತರು ಕಬ್ಬು ಪೂರೈಸಿದ 14 ದಿನದೊಳಗೆ ಕಾರ್ಖಾನೆಗಳು ಬಿಲ್ ಪಾವತಿಸಬೇಕು. ಆದರೆ, ಇದುವರೆಗೂ ಜನವರಿ, ಫೆಬ್ರವರಿ ತಿಂಗಳ ಕಬ್ಬಿನ ಬಿಲ್ ಪಾವತಿಸಿಲ್ಲ.
ರಾಜ್ಯದಲ್ಲಿ 78 ಸಕ್ಕರೆ ಕಾರ್ಖಾನೆಗಳಿದ್ದು ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 5.86 ಕೋಟಿ ಟನ್ ಕಬ್ಬು ನುರಿಸಲಾಗಿದೆ. ಶೇ.9.04 ರಿಕವರಿ ಬಂದಿದೆ. ಬೆಳೆಗಾರರಿಗೆ ಒಟ್ಟು 19,900 ಕೋಟಿ ರೂ. ಪಾವತಿಸಬೇಕಿದ್ದು ಮೇ ಅಂತ್ಯದವರೆಗೆ 19,505 ಕೋಟಿ ರೂ. ಪಾವತಿಸಿವೆ. ಹಿಂದಿನ ಹಂಗಾಮಿನಲ್ಲಿ ಎಫ್‌ಆರ್‌ಪಿ 2,920 ರೂ. ಇತ್ತು. ಈ ಬಾರಿ ಎಫ್‌ಆರ್‌ಪಿ 3,150 ರೂ.ಗೆ ಏರಿಸಲಾಗಿದೆ. ಆದರೆ, ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ರೈತರಿಗೆ ಎಫ್‌ಆರ್‌ಪಿ ಹೆಚ್ಚಳದ ಲಾಭ ಕೈಗೆ ಸಿಗದಂತಾಗಿದೆ.
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಕೋಟಿ ಬಿಲ್ ಬಾಕಿ ಇದೆ ಎಂಬುವುದನ್ನು ನೋಡುವುದಾದರೆ ಬೆಳಗಾವಿ 150 ಕೋಟಿ ರೂ., ಬಾಗಲಕೋಟೆ 30 ಕೋಟಿ ರೂ., ಬೀದರ್ 60 ಕೋಟಿ ರೂ., ವಿಜಯಪುರ 16 ಕೋಟಿ ರೂ. ಸೇರಿದಂತೆ ಒಟ್ಟು 395 ಕೋಟಿ ರೂ. ಬಿಲ್ ಬಾಕಿ ಇವೆ. ಹೀಗಾಗಿ ರೈತರು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.