ಯಶ್ವಸ್ವಿಯಾಗಿ ಮುಗಿದ ರೈತ ಪ್ರತಿಭಟನೆ, ದೆಹಲಿ ಗಡಿಯಲ್ಲಿ ಟೆಂಟ್ ತೆರವು……
ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನ ಹಿಂಪಡೆದಿದೆ. ಅಲ್ಲದೆ ರೈತ ಸಂಘಗಳ ಹಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ರೈತ ಸಂಘಟನೆಗಳು ಪ್ರತಿಭಟನೆ ಸಂಪೂರ್ಣವಾಗಿ ಮುಕ್ತಾಯಗೊಳಿಸಿವೆ. ಒಂದು ವರ್ಷಗಳ ಕಾಲ ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು-ಟಿಕ್ರಿ ಗಡಿಯಲ್ಲಿ ಧರಣಿ ನಡೆಸುತ್ತಿದ್ದ ರೈತರು ಇಂದು ಟೆಂಟ್ ಗಳನ್ನ ತೆರವುಗೊಳಿಸಿ ಮನೆಗೆ ಮರಳುತ್ತಿದ್ದಾರೆ.
26 ನವೆಂಬರ್ 2020 ರಂದು, ಅಂದರೆ 380 ದಿನಗಳ ಹಿಂದೆ, ರೈತರು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದರು. ಜನವರಿ 26 ರಂದು ನಡೆದ ಟ್ರಾಕ್ಟರ್ ರ್ಯಾಲಿಯಲ್ಲಿ ಗಲಬೆ ಹಿಂಸಾಚಾರಗಳು ನಡೆದಿದ್ದವು. ಇಂದು ಡಿಸೆಂಬರ್ 11 ರಂದು ರೈತರು ಪ್ರತಿಭಟನೆಯ ವಿಜಯಶಾಲಿಯಾಗಿ ಮನೆಗೆ ಮರಳುತ್ತಿದ್ದಾರೆ..
ಸಿಂಘು ಗಡಿಯಿಂದ ಹೊರಡುವ ಮುನ್ನ ರೈತರು ಭಾಂಗ್ರಾ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು. ಕಳೆದ 380 ದಿನಗಳ ನಂತರ ಮನೆಗೆ ಮರಳಿದ ಸಂತಸ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈತ್ ಮಾತನಾಡಿ “ಇಂದಿನ ಸಭೆಯಲ್ಲಿ, ನಮಗೆ ಸಹಾಯ ಮಾಡಿದ ಜನರನ್ನು ಭೇಟಿ ಮಾಡುತ್ತೇವೆ. ಮಾತನಾಡುತ್ತೇವೆ, ಪ್ರಾರ್ಥಿಸುತ್ತೇವೆ. ರೈತರು ಈಗಾಗಲೇ ಖಾಲಿ ಮಾಡಲು ಪ್ರಾರಂಭಿಸಿದ್ದಾರೆ, ಇದು 4-5 ದಿನಗಳನ್ನು ತೆಗೆದುಕೊಳ್ಳುತ್ತದೆ. ನಾನು ಡಿಸೆಂಬರ್ 15 ರಂದು ಹೊರಡುತ್ತೇನೆ, ”ಎಂದು ಹೇಳಿದರು.
ಗಡಿಗಳಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್‌ಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.ಟೆಂಟ್‌ಗಳನ್ನು ಬಿಚ್ಚಿ, ಅಡುಗೆ ಸಾಮಗ್ರಿಗಳು, ಹಾಸಿಗೆ ಮತ್ತಿತರ ಸಾಧನಗಳನ್ನು ವಾಹನಗಳಿಗೆ ಹೇರಿಕೊಂಡು ರೈತರು ತಮ್ಮ ಊರುಗಳ ಕಡೆಗೆ ಹೊರಡಲು ಅನುವಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಷ್ಟು ದಿನಗಳ ಕಾಲ ವಾಸವಿದ್ದ ರಸ್ತೆ ಹಾಗೂ ಅದರ ಸಮೀಪದ ಸ್ಥಳಗಳನ್ನೂ ರೈತರು ಸ್ವಚ್ಛಗೊಳಿಸಿದರು.








