ಮಂಡ್ಯ: ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಹೆಚ್ಚುತ್ತಾಹೋದಂತೆ ನಗರ ಪ್ರದೇಶಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರ ಸಂಖ್ಯೆ ಕಡಿಯಾಗುತ್ತಾ ಸಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಹೊಲದಲ್ಲಿ ದುಡಿಯುವ ಕೈಗಳೇ ಇಲ್ಲದ ಪರಿಸ್ಥಿತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾಡಲಾರಂಭಿಸಿದೆ. ಪ್ರತಿ ತಿಂಗಳು ನಗರ-ಪಟ್ಟಣಗಳಲ್ಲಿ ಕೊಡುವ ಸಂಬಳವನ್ನು ನಾವೇ ಕೊಡುತ್ತೇವೆ, ರೈತರು ಬೇಕಾಗಿದ್ದಾರೆ. ತಿಂಗಳಿಗೆ 10ರಿಂದ 30 ಸಾವಿರ ಸಂಬಳ ಕೊಡುತ್ತೇವೆ, ನಮ್ಮ ದೂರವಾಣಿ ನಂಬರ್ ಸಂಪರ್ಕಿಸಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲಾಗುತ್ತಿದೆ.
ಹೌದು, ಇಂತಹದೊಂದು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯದಲ್ಲಿ ಹರಿಬಿಟ್ಟವರು ಮಂಡ್ಯ ಜಿಲ್ಲೆ ಪಾಂಡವಪುರದ 6 ಮಂದು ಯುವ ಉತ್ಸಾಹಿಗಳ ತಂಡ. ಈ ತಂಡದಲ್ಲಿ ಕಮಲೇಶ್, ದೀಪಕ್, ಮಹೇಶ್, ಶ್ರೀಕಾಂತ್, ಮೇಘ ಹಾಗೂ ಸೌಮ್ಯ ಒಳಗೊಂಡ ತಂಡ, ಗ್ರಾಸ್ರೂಟ್ ಆರ್ಗಾನಿಕ್ ಎಂಬ ಸಂಸ್ಥೆಯನ್ನ ಆರಂಭಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತೆಂಗಿನ ಎಣ್ಣೆ, ನೆಲಗಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ..ಹೀಗಾಗೆ ಹಳ್ಳಿಗಳಲ್ಲಿ ಸಿಗುವ ಎಣ್ಣೆ ಕಾಳುಗಳನ್ನು ಸಂಗ್ರಹಿಸಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡುವ ಯೋಜನೆ ರೂಪಿಸಿದರು. ಪರಿಶುದ್ಧವಾದ ಎಣ್ಣೆಯನ್ನು ಪ್ಯಾಕ್ ಮಾಡಿ ತಾವೇ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಾರಂಭಿಸಿದರು.
ಎಲ್ಲಾ ಆಹಾರ ಪದಾರ್ಥಗಳಲ್ಲಿ ರಾಯಾಯನಿಕ ಅಂಶ ಜಾಸ್ತಿಯಾಗುತ್ತಿರುವ ಈ ಕಾಲಮಾನದಲ್ಲಿ ನೈಸರ್ಗಿಕ ಉತ್ಪನ್ನಗಳತ್ತ ಜನರ ವಾಲಲು ಆರಂಭಿಸಿದ್ದಾರೆ. ಮನೆಯಲ್ಲೇ ಬಳೆದ, ನೈಸರ್ಗಿಕ ಉತ್ಪನ್ನಗಳಿಗೆ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಭಾರಿ ಬೇಡಿಕೆ ಇದೆ. ಇದನ್ನೇ ಅರಿತ ಯುವಕರ ತಂಡ, ಕಟ್ಟಪಟ್ಟು ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡಲು ಆರಂಭಿಸಿದರು. ಮೊದಲು ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ಈಗಂತೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಕೊರೊನಾ ಮಹಾಮಾರಿ ತಡೆಗೆ ಮಾಡಲಾದ ಲಾಕ್ಡೌನ್ನಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳಲ್ಲಿದ್ದವರು ಕೆಲಸ ಕಳೆದುಕೊಂಡು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಳ್ಳಿಗಳಲ್ಲೇ ಬೆಳೆದ ಹಣ್ಣು-ತರಕಾರಿ ಸೇರಿದಂತೆ ವಿವಿಧ ಉತ್ಪಗಳನ್ನು ಆಪ್ ಮೂಲಕ ನೇರವಾಗಿ ಮಾರಾಟ ಮಾಡಿ ಉತ್ತಮ ಲಾಭ ಪಡೆದವರೂ ಇದ್ದಾರೆ.
ಹೀಗಾಗಿ ನೈಸರ್ಗಿಕ ಎಣ್ಣೆ ತೆಗೆದು ಮಾಡುತ್ತಿದ್ದ ಈ ಯುವಕರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನೈಸರ್ಗಿಕವಾಗಿ ಹಣ್ಣು-ತರಕಾರಿ ಬೆಳೆಯುವ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. 
ರೈತರು ಬೇಕಾಗಿದ್ದಾರೆ..!
ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯಲು ಭೂಮಿ ಇದ್ದರೂ, ದುಡಿಯುವ ಕೈಗಳಿಗೆ ಕೊರತೆ ಇದೆ. ವರ್ಷಪೂರ್ತಿ ಹೊಲದಲ್ಲಿ ಕೆಲಸ ಮಾಡಿದರೂ ಮೂರು ಹೊತ್ತಿನ ತುತ್ತಿಗೂ ಪರದಾಡಬೇಕೆಂದು ಹಳ್ಳಿಗಳ್ಳಿ ಸರ್ವೇಸಾಮಾನ್ಯ. ಈ ಗ್ರಾಸ್ರೂಟ್ ಆರ್ಗಾನಿಕ್ ತಂಡದ ಸದಸ್ಯರೂ ಕೂಡ ಒಂದು ಕಾಲದಲ್ಲಿ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಲ್ಲಿ ಕೆಲಸ ಹುಡುಕಿಕೊಂಡು ವಲಸೆ ಹೋದವರೆ. ನಗರಗಳಲ್ಲೂ ಜೀವನ ಉತ್ತಮವಾಗಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಹುಟ್ಟೂರಿನಲ್ಲೇ ಸ್ವಂತ ಉದ್ಯೋಗ ಏಕೆ ಮಾಡಬಾರದು ಎಂದಾಗ ಹೊಳೆದದ್ದೇ ಗ್ರಾಸ್ರೂಟ್ ಆರ್ಗಾನಿಕ್.
ನೈಸರ್ಗಿಕವಾಗಿ ತೆಗೆದ ಎಣ್ಣೆ ಉತ್ಪನ್ನಗಳಿಗೆ ಡಿಮ್ಯಾಂಡ್ ಬರುತ್ತಿದ್ದಂತೆ ಉಳುಮೆ ಮಾಡಲು ಆಗದೇ ಬಿಟ್ಟಿದ್ದ ಜಮೀನಿನನ್ನೇ ಇಟ್ಟುಕೊಂಡು ಏನಾದರೂ ಒಂದು ಹೊಸ ಪ್ರಯತ್ನ ಮಾಡಲೇಬೇಕು ಎಂದು ಈ ಯುವಕರು ನಿರ್ಧಾರ ಮಾಡಿದರು. ಸುಮಾರು 10 ಎಕರೆ ಭೂಮಿಯಲ್ಲಿ ಹಣ್ಣು, ತರಕಾರಿ, ಸೊಪ್ಪು, ಎಣ್ಣೆಕಾಳುಗಳಲ್ಲಿ ಯಾವುದೇ ರಸಗೊಬ್ಬರ, ಕೀಟನಾಶಕ ಬಳಸದೇ ಬೆಳೆಯೋಣ ಎಂದು ಹೊರಟ ಯುವಕರಿಗೆ ಎದುರಾಗಿದ್ದು, ರೈತ ಕಾರ್ಮಿಕರ ಸಮಸ್ಯೆ.
ಹೊಲದಲ್ಲಿ ಕೆಲಸ ಮಾಡಲು ಬನ್ನಿ ಎಂದರೆ ಐದಾರು ಸಾವಿರ ಸಂಬಳಕ್ಕ ಬೆಂಗಳೂರು-ಮೈಸೂರಿಗೆ ಹೋಗಿ ಬರುವ ಯುವಕರನ್ನು ಕಂಡು ಈ ಯುವಕರು, ಬೆಂಗಳೂರಿನಂತಹ ನಗರಗಳಲ್ಲಿ ಕೊಡುವ ಸಂಬಳಕ್ಕಿಂತ ನಾವು ಹೆಚ್ಚೇ ಕೊಡುತ್ತೇವೆ. ತಿಂಗಳಿಗೆ 10 ಸಾವಿರದಿಂದ 30 ಸಾವಿರ ಕೊಡುತ್ತೇವೆ. ಕೆಲಸ ಮಾಡಲು ಇಚ್ಚಿಸುವವರು ಬನ್ನಿ ಎಂದು ಗೋಗರೆದರೂ ಅಂತಹ ಪ್ರತಿಕ್ರಿಯೆ ಏನೂ ಸಿಕ್ಕಿಲ್ಲ. ಆಗ ಹೊಳೆದದ್ದೇ ಸೋಷಿಯಲ್ ಮೀಡಿಯಾ.
ರೈತರು ಬೇಕಾಗಿದ್ದಾರೆ, ತಿಂಗಳಿಗೆ 10,000 ದಿಂದ 30,000 ರೂ. ಸಂಬಳ ಕೊಡುತ್ತೇವೆ ಎಂದು ಪೋಸ್ಟರ್ ಹಾಕಿದರು. ಈ ಪೋಸ್ಟರ್ಗೆ ಸಾಮಾಜಿಕ ತಾಲತಾಣಗಳಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ತಂಡನೈಸರ್ಗಿಕ ಕೃಷಿ ಚಟುವಟಿಕೆ ಆರಂಭಿಸಿದೆ. ಈ ಉತ್ಸಾಹಿ ತಂಡಕ್ಕೆ ಸಾಕ್ಷಾಟಿವಿ ಕಡೆಯಿಂದಲೂ ಗುಡ್ಲಕ್.
ಸಂಪರ್ಕಿಸಬೇಕಾದ ವಿಳಾಸ: 9844123344/9164468872








