ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ಇಲ್ಲದಿದ್ದರೆ ಏನಾಗುತ್ತೆ..?
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫೆಬ್ರವರಿ 15ರಿಂದಲೇ ಅಂದ್ರೆ ಭಾನುವಾರ ಮಧ್ಯರಾತ್ರಿಯಿಂದಲೇ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಮೊತ್ತದ ಟೋಲ್ ಮೊತ್ತ ಪಾವತಿಸಬೇಕಾಗುತ್ತದೆ. ಈಗಾಗಲೇ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ದಿನಾಂಕವನ್ನು ಹಲವು ಬಾರಿ ಮುಂದೂಡಿಕೆ ಮಾಡಲಾಗಿತ್ತು. ಆದ್ರೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೊದಲು ಜನವರಿ 1ರಿಂದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಕೆಲ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದ ಕಾರಣ ಫೆ.15ರವರೆಗೆ ಗಡುವು ವಿಸ್ತರಿಸಲಾಗಿತ್ತು.
ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಈಗ ಹೆಚ್ಚಾಗುತ್ತಿದೆ. 2019ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.
2017ರ ಡಿಸೆಂಬರ್ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಬಳಿಕ ಈ ವಿನಾಯಿತಿಯನ್ನು ತೆಗೆದ ಸರ್ಕಾರ ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್ಟ್ಯಾಗ್ ಅಳವಡಿಸಿರಬೇಕೆಂದು ಸೂಚಿಸಿತ್ತು. ಏಪ್ರಿಲ್ 2021 ರಿಂದ ಥರ್ಡ್ ಪಾರ್ಟಿ ವಿಮೆ ಮಾಡಿಸಬೇಕಿದ್ದರೂ ಫಾಸ್ಟ್ಟ್ಯಾಗ್ ಕಡ್ಡಾಯ. ಇದರ ಜೊತೆ ಹಳೆ ವಾಹನಗಳ ಫಿಟ್ ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಅಳವಡಿಸಿರಬೇಕು.