ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಮಗಳ ಮದುವೆ ದಿನವೇ ಸಾವನ್ನಪ್ಪಿದ್ದು, ಗೊತ್ತಿಲ್ಲದೆ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬುವವರ ಮಗಳ ಮದುವೆ ಭಾನುವಾರ ಹಾಗೂ ಇಂದು ನಿಶ್ಚಯವಾಗಿತ್ತು. ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಮದುವೆ ಪತ್ರಿಕೆ ನೀಡಿಲ್ಲ ಎಂದು ಕೊಡಲು ಹೋಗಿದ್ದರು. ಈ ವೇಳೆ ಮರಳಿ ಬರುತ್ತಿದ್ದಾಗ ಬೈಕ್ ಅಪಘಾತವಾಗಿ ಚಂದ್ರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ.
ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಲ್ಲುತ್ತೆ ಎಂದು ಕುಟುಂಬಸ್ಥರು ವಿಷಯವನ್ನು ಮೃತ ಚಂದ್ರು ಪತ್ನಿ ಹಾಗೂ ಮಗಳು ದೀಕ್ಷಾಗೆ ಹೇಳಿಲ್ಲ. ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ.
ಮದುವೆ ಸಮಾರಂಭ ಮುಗಿದ ನಂತರ ತಾಯಿ ಹಾಗೂ ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲ್ಯಾಣ ಮಂಟಪದಿಂದ ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡ ಬಂದಿತ್ತು. ಈಗ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.








