ಕೊರೊನಾ ಸೋಂಕಿಗೆ ಜ್ವರ ಪ್ರಮುಖ ಲಕ್ಷಣವಲ್ಲ – ಏಮ್ಸ್
ಹೊಸದಿಲ್ಲಿ, ಜುಲೈ 26: ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಜ್ವರವನ್ನು ಪ್ರಮುಖ ಲಕ್ಷಣವಾಗಿ ಪರಿಗಣಿಸುವುದರಿಂದ ಹಲವಾರು ಕೋವಿಡ್ -19 ಪ್ರಕರಣಗಳು ಚಿಕಿತ್ಸೆಯಿಂದ ತಪ್ಪಿಸಿಕೊಳ್ಳಬಹುದು.
ಉತ್ತರ ದೆಹಲಿಯಲ್ಲಿ ಕೋವಿಡ್ -19 ದೃಢಪಟ್ಟು 144 ಆಸ್ಪತ್ರೆಗೆ ದಾಖಲಾದ ರೋಗಿಗಳ ಅಧ್ಯಯನ ನಡೆಸಿದ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್), ಗುರುವಾರ ತನ್ನ ವರದಿಯನ್ನು ಪ್ರಕಟಿಸಿದೆ.

ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸೇರಿದಂತೆ 29 ಲೇಖಕರು ನಡೆಸಿದ ಈ ಅಧ್ಯಯನಕ್ಕೆ ‘ಉತ್ತರ ಭಾರತದ ತೃತೀಯ ಆರೈಕೆ ಕೇಂದ್ರದಲ್ಲಿ ದಾಖಲಾದ ಕೋವಿಡ್ -19 ರೋಗಿಗಳ ಕ್ಲಿನಿಕೊ-ಡೆಮೊಗ್ರಾಫಿಕ್ ಪ್ರೊಫೈಲ್ ಮತ್ತು ಆಸ್ಪತ್ರೆಯ ಫಲಿತಾಂಶಗಳು’ ಎಂಬ ಶೀರ್ಷಿಕೆಯಿದೆ ಮತ್ತು ಮಾರ್ಚ್ 23 ರಿಂದ ಎಪ್ರಿಲ್ 15 ರವರೆಗಿನ ಪ್ರವೇಶ ಡೇಟಾವನ್ನು ಬಳಸಲಾಗಿದೆ.
144 ರೋಗಿಗಳಲ್ಲಿ ಶೇ.93ರಷ್ಟು ಮಂದಿ ಪುರುಷರಿದ್ದರೆ, 10 ಮಂದಿ ವಿದೇಶದವರಿದ್ದರು. ಅವರಲ್ಲಿ ಕೇವಲ 17ರಷ್ಟು ಮಂದಿಗೆ ಜ್ವರ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಶೇ.44 ರಷ್ಟು ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು ಶೇ.88ರಷ್ಟು ಮಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ನಂತರ ಜ್ವರ ಕಾಣಿಸಿಕೊಂಡಿದೆ.

ಕೆಲವರಲ್ಲಿ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ, ಕಫ, ಗಂಟಲಿನಲ್ಲಿ ಕಿರಿಕಿರಿ ಮುಂತಾದ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಶೇ.44 ರಷ್ಟು ಮಂದಿಗೆ ಯಾವುದೇ ಕೊರೊನಾ ಲಕ್ಷಣಗಳಿರಲಿಲ್ಲ. ಲಕ್ಷಣಗಳು ಕಾಣಿಸಿಕೊಳ್ಳದವರಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ.
144 ಮಂದಿ ರೋಗಿಗಳಲ್ಲಿ ನಾಲ್ಕು ಮಂದಿಯ (ಶೇ.2.8ರಷ್ಟು) ಪರಿಸ್ಥಿತಿ ಗಂಭೀರವಾಗಿದ್ದರೆ, ದಾಖಲಾಗುವ ಸಂದರ್ಭದಲ್ಲಿ ಕೇವಲ 16 ಮಂದಿಗೆ ಮಾತ್ರ ಜ್ವರ ಕಾಣಿಸಿಕೊಂಡಿತ್ತು








