ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಒಂದೇ ಸಸ್ಯ ಮದ್ದು ಮಲೆನಾಡಿನ ಕಾಡತ್ತಿ ಅಥವಾ ಗರಗತ್ತ:
ಪಶ್ಚಿಮಘಟ್ಟದಲ್ಲಿ ವಿಫುಲವಾಗಿ ಬೆಳೆಯುವ ಸಸ್ಯ ಕಾಡತ್ತಿ ಅಥವಾ ಕಾಡು ಅತ್ತಿ ಅಥವಾ ಗರಗತ್ತ ಸಹ ಹಿತ್ತಿಲ ಗಿಡ ಮದ್ದು. ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಇದನ್ನು ಗರಗತ್ತದ ಮರ ಎಂದೂ ಕರೆಯಲಾಗುತ್ತದೆ. ಇದರ ಎಲೆಗಳನ್ನು ಹಿಂದೆ ಕಾಗದದ ರೂಪದಲ್ಲಿ ಬಳಸಲಾಗುತ್ತಿತ್ತು. ಇದರ ಸಸ್ಯಶಾಸ್ತ್ರದ ಹೆಸರು ಫೈಕಸ್ ಹಿಸ್ಪಿಡಾ (Ficus hispida). ಇಂಗ್ಲೀಷ್ ನಲ್ಲಿ ಇದನ್ನು ಹೈರಿ ಫಿಗ್ (Hairy fig), ಡೆವಿಲ್ ಫಿಗ್ (devil fig) ಎಂದೂ ಕರೆಯಲಾಗುತ್ತದೆ.
ಕಾಡತ್ತಿಯ ಮರದಲ್ಲಿ ಕಾಗೆಗಳು ಹೆಚ್ಚಾಗಿ ಗೂಡು ಕಟ್ಟಿ ಇದರ ಹಣ್ಣುಗಳನ್ನು ತಿನ್ನುತ್ತವೆಯಾದ್ದರಿಂದ ಸಂಸ್ಕೃತದಲ್ಲಿ ಕಾಕೂದುಂಬರ ಎಂದೂ ಮತ್ತು ಇದರ ಕಟ್ಟಿಗೆ ಅತ್ಯಂತ ಗಟ್ಟಿಯಾಗಿರುವುದರಿಂದ ಕಾಷ್ಟೋದುಂಬರ ಎಂದೂ ಸಂಸ್ಕೃತದ ಆಯುರ್ವೇದದ ಗ್ರಂಥದಲ್ಲಿ ಇದರ ಉಲ್ಲೇಖವಿದೆ. ಕಾಡು ಅತ್ತಿಯನ್ನು ಲಘು ಜ್ವರ, ಕೆಮ್ಮು, ಬೆನ್ನು ಮೂಳೆಯ ನೋವು, ಅಸ್ತಮಾದಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಔಷದದ ರೂಪದಲ್ಲಿ ನೀಡಲಾಗುತ್ತದೆ. ಇದರ ಹಣ್ಣು ಹಾಗೂ ತೊಗಟೆಯಿಂದ ಕಷಾಯ ತಯಾರಿಸಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಪಿತ್ತ ಪ್ರಕೋಪ ಉಪಶಮನವಾಗುತ್ತದೆ.
ಇದರ ಹಣ್ಣನ್ನು ನುಣ್ಣಗೆ ಅರೆದು ಗಾಯಗಳಿಗೆ ಲೇಪಿಸುವುದರಿಂದ ಗಾಯ ವಾಸಿಯಾಗುತ್ತದೆ ಮತ್ತು ಚರ್ಮಕ್ಕೆ ಈ ಲೇಪನ ಹಚ್ಚಿಕೊಳ್ಳುವುದರಿಂದ ಹುಳುಕಡ್ಡಿಯಂತಹ, ತುರಿಕೆಯಂತಹ ಚರ್ಮರೋಗಗಳು ದೂರವಾಗುತ್ತವೆ. ಕಾಡು ಅತ್ತಿಯ ತೊಗಟೆಯನ್ನು ಕಾಯಿಸಿ ಕಷಾಯವನ್ನಾಗಿ ಸೇವಿಸುವುದರಿಂದ ವಿಷಮ ಶೀತ ಜ್ವರ ವಾಸಿಯಾಗುತ್ತದೆ. ಇದರ ಬೇರಿನ ಚೂರ್ಣ ಮತ್ತು ಹರಳೆಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚುವುದರಿಂದ ಇಸುಬಿನಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಜಾಂಡೀಸ್, ಫೈಲ್ಸ್ ಮುಂತಾದ ಸಮಸ್ಯೆಗಳಿಗೂ ಇದರ ಕಷಾಯ ರಾಮಭಾಣವಾಗಿದೆ. ಇದರ ಹಣ್ಣು ಶಕ್ತಿವರ್ಧಕವೂ ಹೌದು. ಸ್ತ್ರೀಯ ರಕ್ತಸ್ರಾವ ನಿಯಂತ್ರಣಕ್ಕಾಗಿ ಕಾಡು ಅತ್ತಿಯ ಹಣ್ಣಿನ ಪಾನೀಯದಲ್ಲಿ ಜೇನು ಬೆರೆಸಿ ಕುಡಿಸಲಾಗುತ್ತದೆ. ಕಾಡತ್ತಿಯ ಬೇರಿನ ಚೂರ್ಣವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಅತಿಸಾರ, ರಕ್ತಬೇಧಿ, ಹೊಟ್ಟೆಯುಬ್ಬರ, ಸುಸ್ತು, ಸಂಕಟ ಮುಂತಾದ ಸಮಸ್ಯೆಗಳಿಗೂ ಇದರ ಬೇರಿನ ಚೂರ್ಣ, ತೊಗಟೆಯ ಕಷಾಯ ಅದ್ಭುತ ಔಷದವಾಗಿದೆ.
-ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು