🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್ ಮಹಾಸಾಗರದ ಅಲೆಗಳಿಂದ ಹರಿದು ಬರುವ ಮಿನುಗುವ ನೀಲಿ ನೀರಿನ ಕಣಿವೆಗಳೇ ಈ ಭೂಮಿಯ ಬಾಹುಗಳು. ಹಸಿರಿನಿಂದ ಕಂಗೊಳಿಸುತ್ತಿರುವ ದಟ್ಟವಾದ ಕಾಡುಗಳೇ ಈ ನೆಲದ ಬಲವಾದ ಬೇರುಗಳು. ಧುಮ್ಮುಕ್ಕುವ ಜಲಪಾತಗಳು, ಸೂರ್ಯ ಚಂದ್ರನÀ ಕಣ್ಣಾಮುಚ್ಚಾಳೆಯಾಟ. ಭೂಗರ್ಭದಲ್ಲಿ ಅಡಗಿರುವ ನಿಗೂಢ ರಹಸ್ಯಗಳೇ ಈ ವಸುಂಧರೆಯ ಉಸಿರು. ಪ್ರಕೃತಿಯ ವಿಸ್ಮಯವೇ ಈ ಧರೆಯ ಆಕರ್ಷಣೆ. ಇತಿಹಾಸ, ಸಂಸ್ಕøತಿ, ಆಚಾರ ವಿಚಾರಗಳೇ ಈ ರಾಷ್ಟ್ರದ ಜೀವನಾಡಿ. ಸಾವಿರಾರು ವರ್ಷಗಳಿಂದ ಪ್ರಕೃತಿಯ ಜೊತೆ ಚೆಲ್ಲಾಟವಾಡಿಕೊಂಡು ವಿಶ್ವ ಭೂಪಟದಲ್ಲಿ ತನ್ನ ಹೆಜ್ಜೆಯ ಗುರುತು ಮೂಡಿಸಿರುವ ಹೆಮ್ಮೆಯ ಸಣ್ಣ ರಾಷ್ಟ್ರ
ಅದು ನಾರ್ವೆ…! ಸೂರ್ಯನ ಮಧ್ಯರಾತ್ರಿಯ ನಿಲ್ದಾಣ..!🏔️
ಹೌದು. ನಾರ್ವೆ, ಯುರೋಪ್ ಖಂಡದ ತುತ್ತ ತುದಿಯ ಉತ್ತರ ಭಾಗದ ಪಶ್ಚಿÀಮ ಕರಾವಳಿ ತೀರದಲ್ಲಿದೆ. ಕೇವಲ 55 ಲಕ್ಷ ಜನಸಂಖ್ಯೆ. 3,85,207 ಚದರ ಕಿಲೋ ಮೀಟರ್ ವಿಸ್ತೀರ್ಣ. 15 ಆಡಳಿತ ಪ್ರದೇಶಗಳು. ಪ್ರಕೃತಿಯ ನಡುವೆ ವಿಭಿನ್ನತೆಯಲ್ಲಿ ಏಕತೆ ಎಂಬಂತೆ ಜೀವನ ಸಾಗಿಸುತ್ತಿರುವ ಪ್ರಾಚೀನ ಹಿನ್ನಲೆಯುಳ್ಳ ದೇಶ.
ನಾರ್ವೆ ದೇಶದ ಪ್ರಾಚೀನ ಇತಿಹಾಸ..! ⚔️
ಮಂಜಿನಿಂದ ಆವೃತಗೊಂಡಿರುವ ಈ ನೆಲದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸಾಮಿ ಎಂಬ ಬುಡಕಟ್ಟು ಜನಾಂಗದವರು ವಾಸ ಮಾಡುತ್ತಿದ್ದರು. ಬೆಟ್ಟಗುಡ್ಡಗಳು, ಕಾಡು, ಹಿಮಪರ್ವತಗಳೇ ಅವರ ವಾಸಸ್ಥಾನವಾಗಿತ್ತು. ಅಲೆಮಾರಿಗಳಾಗಿ ಬೇಟೆಯಾಡುತ್ತಾ, ಮೀನು ಹಿಡಿಯುತ್ತಾ, ಹಿಮ ಸಾರಾಂಗಗಳನ್ನು ಸಾಕಿ ಜೀವನ ಸಾಗಿಸುತ್ತಿದ್ದ ಆದಿವಾಸಿಗಳು. ಇನ್ನೊಂದೆಡೆ ವೈಕಿಂಗ್ಸ್ ಯೋಧರು. ಇವರು ಮೂಲತಃ ಜರ್ಮಾನಿಕ್ ಬುಡಕಟ್ಟು ಜನಾಂಗದವರು. ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಸುತ್ತಮುತ್ತ ಸಮುದ್ರಯಾನ ಮಾಡುತ್ತಿದ್ದ ಧೀರರು. ಕ್ರಮೇಣ ಹೊಸ ಅನ್ವೇಷಣೆ, ಯುದ್ಧ, ವ್ಯಾಪಾರ, ಕೃಷಿ ಮಾಡಿಕೊಂಡು ನಾರ್ವೆಯಲ್ಲೇ ರಾಜಪ್ರಭುತ್ವದ ಆಡಳಿತ ನಡೆಸಿ ವೈಕಿಂಗ್‍ಗಳಾಗಿ ಖ್ಯಾತಿ ಪಡೆದಿದ್ದರು.
ಒಂದು ಕಾಲದಲ್ಲಿ ತಮ್ಮ ಅಪ್ರತಿಮ ಸಾಹಸದಿಂದ ವೈಕಿಂಗ್ಸ್‍ಗಳು ಆಂಗ್ಲರಿಗೂ ಭೀತಿ ಮೂಡಿಸಿದ್ದರು. ಆಧುನಿಕ ಇತಿಹಾಸದ ಪ್ರಕಾರ ಮೊದಲ ಮಹಾಯುದ್ಧದಲ್ಲಿ ನಾರ್ವೆ ತಟಸ್ಥವಾಗಿತ್ತು. ಆದ್ರೆ, ನಾರ್ವೆಯ ವಿರುದ್ಧ ಜರ್ಮನಿಯ ಹಿಟ್ಲರ್ ಆಕ್ರಮಣ ಮಾಡಿದ್ದಾಗ 2ನೇ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳ ಜೊತೆ ಸೇರಿಕೊಂಡಿತ್ತು. ಹೀಗಾಗಿ ನಾರ್ವೆ ಮತ್ತು ಬ್ರಿಟಿಷರ ಜೊತೆಗಿನ ಸ್ನೇಹ ಸಂಬಂಧ ಇಂದಿಗೂ ಉತ್ತಮವಾಗಿದೆ. ಇದೀಗ ಸ್ವತಂತ್ರ್ಯ ದೇಶವಾಗಿರುವ ನಾರ್ವೆಯಲ್ಲಿ ಚುನಾಯಿತ ಸರ್ಕಾರ ದೇಶದ ಚುಕ್ಕಾಣಿ ಹಿಡಿದಿದ್ರೂ ರಾಜಪ್ರಭುತ್ವದ ಗೌರವವನ್ನು ಉಳಿಸಿಕೊಂಡಿದೆ.
ಬ್ರಿಟಿಷ್ ನಾವಿಕರಿಂದ ನಾರ್ವೆಗೆ ಪರಿಚಯವಾದ ಫುಟ್‍ಬಾಲ್ ಚೆಂಡು..!⚽
ಹಾಗೇ ನೋಡಿದ್ರೆ ನಾರ್ವೆ ದೇಶಕ್ಕೂ ಫುಟ್‍ಬಾಲ್‍ಗೂ ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಲ್ಲಿ ನಾರ್ವೆಗೆ ಆಂಗ್ಲರಿಂದ ಬಳುವಳಿಯಾಗಿ ಬಂದಿರುವ ಆಟವೇ ಫುಟ್‍ಬಾಲ್. ಸಾಮಾನ್ಯವಾಗಿ ಬ್ರಿಟಿಷರು ಅಂದ್ರೆ ಕ್ರಿಕೆಟ್ ಆಟವೇ ನೆನಪಿಗೆ ಬರುತ್ತದೆ. ಆದ್ರೆ ವ್ಯಾಪಾರಕ್ಕಾಗಿ ಬ್ರಿಟಿಷರ ಹಡಗುಗಳು ನಾರ್ವೆ ಬಂದರುಗಳಿಗೆ ಬಂದಾಗ, ಬ್ರಿಟಿಷ್ ನಾವೀಕರು ಬಿಡುವಿನ ವೇಳೆಯಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಇದನ್ನು ಆಶ್ಚರ್ಯದಿಂದ ನೋಡುತ್ತಿದ್ದ ನಾರ್ವೆಯ ಹುಡುಗರು ಫುಟ್‍ಬಾಲ್ ಆಟದ ಶೈಲಿ ಹಾಗೂ ಕೌಶಲ್ಯಗಳನ್ನು ಕಲಿತುಕೊಂಡ್ರು. ನಾರ್ವೆಯ ಪ್ರಕೃತಿಯ ಕಠಿಣ ಸವಾಲುಗಳ ನಡುವೆಯೂ ಫುಟ್‍ಬಾಲ್ ಆಟವನ್ನು ಕರಗತ ಮಾಡಿಕೊಂಡಿದ್ರು. ಮೊದಲೇ ವೈಕಿಂಗ್ ಪರಂಪರೆಯ ರಕ್ತ. ಪರಿಣಾಮ 1902ರಲ್ಲಿ ನಾರ್ವೆ ಫುಟ್‍ಬಾಲ್ ಸಂಸ್ಥೆ ಆರಂಭಗೊಂಡಿತ್ತು. ಒಲಿಪಿಂಕ್ಸ್ ಸೇರಿದಂತೆ ಕೆಲವೊಂದು ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ರೂ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯುವುದು ಅಷ್ಟೊಂದು ಸುಲಭವಿರಲಿಲ್ಲ.
ಫಿಫಾ ವಿಶ್ವಕಪ್‍ನಲ್ಲಿ ನಾರ್ವೆ ಫುಟ್‍ಬಾಲ್ ತಂಡ..!
ಆದ್ರೂ 1938ರಲ್ಲಿ ಮೊಟ್ಟ ಮೊದಲ ಬಾರಿ ಫಿಫಾ ವಿಶ್ವಕಪ್‍ನಲ್ಲಿ ನಾರ್ವೆಯ ರಾಷ್ಟ್ರ ಧ್ವಜ ಹಾರಾಡಿತ್ತು. ಅದ್ಭುತ ಆಟವನ್ನಾಡಿದ್ದ ನಾರ್ವೆ ತಂಡ ಪ್ರಿ ಕ್ವಾರ್ಟರ್‍ನಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ನಂತರ ಮಹಾಯುದ್ದ ಸೇರಿದಂತೆ ವಿವಿಧ ಕಾರಣಗಳಿಂದ 1994ರ ತನಕ ಫಿಫಾ ವಿಶ್ವಕಪ್‍ಗೆ ಅರ್ಹತೆಯನ್ನೇ ಪಡೆಯಲಿಲ್ಲ. 1994ರ ಫಿಫಾ ವಿಶ್ವಕಪ್‍ನಲ್ಲಿ ಗ್ರೂಪ್ ಹಂತಕ್ಕೆ ಸೀಮಿತವಾಗಿದ್ರೂ, 1998ರ ಫಿಫಾ ವಿಶ್ವಕಪ್‍ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಅಲ್ಲದೆ ಬಲಿಷ್ಠ ಬ್ರೆಜಿಲ್ ತಂಡವನ್ನು ಸೋಲಿಸಿ ಫುಟ್‍ಬಾಲ್ ಜಗತ್ತನ್ನೇ ಚಕಿತಗೊಳಿಸಿತ್ತು. ಇದೀಗ 2026ರ ಫಿಫಾ ವಿಶ್ವಕಪ್‍ನಲ್ಲೂ ಬ್ರೆಜಿಲ್‍ಗೆ ಶಾಕ್ ನೀಡಿದ್ದ ನಾರ್ವೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಫಿಫಾ ವಿಶ್ವಕಪ್‍ನಲ್ಲಿ ಬ್ರೆಜಿಲ್ ತಂಡವನ್ನು 2 ಬಾರಿ ಸೋಲಿಸಿದ್ರೆ, 3 ಸೌಹಾರ್ದ ಪಂದ್ಯಗಳಲ್ಲೂ ನಾರ್ವೆಯ ವೈಕಿಂಗ್ಸ್ ತಲೆಬಾಗಿಲ್ಲ ಅನ್ನೋದು ವಿಶೇಷ.
ವಿಶ್ವದ ಗಮನ ಸೆಳೆದ ನಾರ್ವೆಯ ಕ್ರೀಡಾ ನೀತಿ..!
ಈ ನಡುವೆ, ನಾರ್ವೆ ಕ್ರೀಡಾ ನಿಯಂತ್ರಣ ಮಂಡಳಿಯು 2007ರಲ್ಲಿ ಕ್ರಾಂತಿಕಾರಿ ನಿಯಮಗಳನ್ನು ಜಾರಿ ಮಾಡಿತ್ತು ನಾರ್ವೆಯ ಪ್ರತಿಯೊಬ್ಬ ಕೋಚ್ ಹಾಗೂ ಕ್ಲಬ್‍ಗಳು ಈ ನಿಯಮಗಳನ್ನು ಪಾಲಿಸಲು ಆದೇಶ ನೀಡಿತ್ತು. ಮಕ್ಕಳಿಗೆ ತಿಳುವಳಿಕೆ ಬರುವ ಮುನ್ನ ಯಾವುದೇ ಒಂದು ಕ್ರೀಡೆಗೆ ಸೀಮಿತಗೊಳಿಸಬಾರದು. ಅವರನ್ನು ಸ್ವತಂತ್ರವಾಗಿ ಎಲ್ಲಾ ಆಟವನ್ನು ಆಡಲು ಬಿಡಬೇಕು. 9 ವರ್ಷದೊಳಗಿನ ಮಕ್ಕಳು ಸ್ಥಳೀಯ ಕ್ಲಬ್ ಪಂದ್ಯಗಳನ್ನು ಮಾತ್ರ ಆಡಬೇಕು. ಅಲ್ಲಿ ಯಾವುದೇ ಪಾಯಿಂಟ್ಸ್, ಟ್ರೋಫಿಗಳು, ಫಲಿತಾಂಶಗಳು ಇರುವುದಿಲ್ಲ. 11 ವರ್ಷದೊಳಗಿನ ಮಕ್ಕಳಿಗೆ ಪ್ರಾದೇಶಿಕ ಮಟ್ಟದ ಟೂರ್ನಿಗಳಲ್ಲಿ ಆಡುವ ಅವಕಾಶವಿದ್ರೂ, ರ್ಯಾಕಿಂಗ್‍ಗಳನ್ನು ಗೌಪ್ಯವಾಗಿಡಲಾಗುತ್ತದೆ.
ಆದ್ರೆ 13 ವರ್ಷದ ನಂತರ ಮಕ್ಕಳಿಗೆ ನಾರ್ವೆಯ ರಾಷ್ಟ್ರೀಯ ಚಾಂಪಿಯನ್‍ಷಿಪ್‍ಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಇಲ್ಲಿಂದ ಅವರಿಗೆ ಇಷ್ಟವಾದ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ. ಇಂದು ನಾರ್ವೆಯ ಸೂಪರ್ ಮ್ಯಾನ್ ಎರ್ಲಿಂಗ್ ಹಾಲಂಡ್ ಆಟವನ್ನು ಗಮನಿಸಿ. ಆತ ಸುಮಾರು ಎಂಟು ವರ್ಷಗಳ ಕಾಲ ಫುಟ್‍ಬಾಲ್ ಜೊತೆಗೆ ಅಥ್ಲೆಟಿಕ್ಸ್, ಹ್ಯಾಂಡ್‍ಬಾಲ್ ಆಟದಲ್ಲೂ ಪಳಗಿದ್ದ. ಹಾಗಾಗಿಯೇ ಆತನ ಆಟದಲ್ಲಿ ಅಥ್ಲೆಟಿಕ್ಸ್‍ನ ವೇಗ, ಹ್ಯಾಂಡ್‍ಬಾಲ್‍ನ ಕೌಶಲ್ಯಗಳನ್ನು ನೋಡಬಹುದಾಗಿದೆ.
ನಾರ್ವೆ ಫುಟ್‍ಬಾಲ್ ಯಶಸ್ಸಿನ ಹಿಂದಿನ ಶಕ್ತಿ ನ್ಯಾಷನಲ್ ಟೀಮ್ ಸ್ಕೂಲ್..!
1998ರ ಫಿಫಾ ವಿಶ್ವಕಪ್ ನಂತ್ರ ನಾರ್ವೆ ಫುಟ್‍ಬಾಲ್ ತಂಡ ತನ್ನ ಮೊನಚನ್ನು ಕಳೆದುಕೊಂಡಿತ್ತು. ಸತತ ನಾಲ್ಕೈದು ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿತ್ತು. ದೇಶದ ಕ್ರೀಡಾ ನೀತಿಯಿಂದ ಎಚ್ಚೆತ್ತುಕೊಂಡ ನಾರ್ವೆ ಫುಟ್‍ಬಾಲ್ ಸಂಸ್ಥೆಯು, 2013ರಲ್ಲಿ ಲ್ಯಾಂಡ್ ಸ್ಲಾಗ್ ಸ್ಕೋಲೆನ್ ಅಂದ್ರೆ ನ್ಯಾಷನಲ್ ಟೀಮ್ ಸ್ಕೂಲ್ (ಎನ್‍ಟಿಎಸ್) ಶುರು ಮಾಡಿತ್ತು. ಹಳೆಯ ರಕ್ಷಣಾತ್ಮಕ ಆಟದ ಬದಲು ಆಧುನಿಕ ನಾರ್ವೆ ಶೈಲಿಯನ್ನು ಅಳವಡಿಸಿಕೊಳ್ಳಲು ಯೋಜನೆ ರೂಪಿಸಿತ್ತು.
ಕ್ರೀಡಾ ನೀತಿಯಂತೆ 12ನೇ ವಯಸ್ಸಿನ ತನಕ ಯಾವುದೇ ಆಯ್ಕೆ ಪ್ರಕ್ರಿಯೆಗಳು ಇರುವುದಿಲ್ಲ. ಆದ್ರೆ 13ನೇ ವಯಸ್ಸಿನಲ್ಲಿ ಜಿಲ್ಲಾ ಮಟ್ಟ ಹಾಗೂ 14ನೇ ವಯಸ್ಸಿನಲ್ಲಿ ಪ್ರಾದೇಶಿಕ ಮಟ್ಟದ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಸ್ಥಳೀಯ ಮಟ್ಟದಲ್ಲೇ ತರಬೇತಿ ನೀಡಲಾಗುತ್ತದೆ. 15 -16ನೇ ವಯಸ್ಸಿಗೆ ಮತ್ತೆ ಆಯ್ಕೆ ಮಾಡಿ ಎನ್‍ಟಿಎಸ್ ಅಕಾಡೆಮಿಗೆ ಸೇರಿಸಿಕೊಳ್ಳಲಾಗುತ್ತದೆ.
ಇಲ್ಲಿ ಆಟಗಾರರ ಪ್ರತಿಭೆ ಮಾತ್ರವಲ್ಲ. ಬುದ್ಧಿವಂತಿಕೆ, ಸಮಯೋಚಿತವಾಗಿ ಆಡುವ ಕಲೆಯ ಜೊತೆಗೆ ಹೊಂದಾಣಿಕೆ ಮತ್ತು ಅಹಂ ಇಲ್ಲದ ಯುವ ಆಟಗಾರರಿಗೆ ಆದ್ಯತೆ ನೀಡಲಾಗುತ್ತದೆ. ಕಠಿಣ ತರಬೇತಿಯ ಜೊತೆಗೆ ಅತ್ಯಾಧುನಿಕ ಮಾದರಿಯ ಸೌಲಭ್ಯಗಳನ್ನು ಕಲ್ಪಿಸಿ ಅದ್ಭುತ ಆಟಗಾರರನ್ನು ತಯಾರು ಮಾಡಲಾಗುತ್ತದೆ. ಅಲ್ಲದೆ ಕೃತಕ ಹುಲ್ಲಿನ ಅಂಗಣದ ಮೇಲೂ ತರಬೇತಿಯನ್ನು ನೀಡಲಾಗುತ್ತದೆ. ಹಾಗೇ,ಪೆಪ್ ಗ್ವಾರ್ಡಿಯೊಲಾ ಮತ್ತು ಜುರ್ಗೆನ್ ಕ್ಲೋಪ್ ಶೈಲಿಯ ತರಬೇತಿ ನಾರ್ವೆಯ ಫುಟ್‍ಬಾಲ್ ಆಟದ ಶೈಲಿಯನ್ನೇ ಬದಲಾಯಿಸಿತ್ತು.
ಸದ್ಯ ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿರುವ 20ಕ್ಕೂ ಹೆಚ್ಚು ಆಟಗಾರರು ಇದೇ ಎನ್‍ಟಿಎಸ್ ನಲ್ಲಿ ತಯಾರಾದ ಆಟಗಾರರು. ಅದರಲ್ಲೂ ಗೋಲು ಮೆಷಿನ್ ಎರ್ಲಿಂಗ್ ಹಾಲಂಡ್, ಮಾರ್ಟಿನ್ ಒಡೆಗಾರ್ಡ್‍ನಂತಹ ಅಪ್ರತಿಮ ಆಟಗಾರರಿಗೆ ವೇದಿಕೆ ನೀಡಿದ್ದೇ ನಾರ್ವೆಯ ಎನ್‍ಟಿಎಸ್ ಅಕಾಡೆಮಿ.
ಅಹಂವಿಲ್ಲದ ಸೂಪರ್‍ಸ್ಟಾರ್ಸ್… ಒಗ್ಗಟ್ಟು, ಸಂಸ್ಕøತಿಯೇ ನಾರ್ವೇ ತಂಡದ ಯಶಸ್ಸಿನ ಸೂತ್ರ..!🏃♂️
ಅಂದ ಹಾಗೇ ನಾರ್ವೆ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರಿದ್ದಾರೆ. ಪ್ರತಿಷ್ಠಿತ ಕ್ಲಬ್‍ಗಳ ಪರ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಹಾಲಿ ನಾರ್ವೆ ತಂಡದಲ್ಲಿರುವ 17 ಆಟಗಾರರು ವಿವಿಧ ಕ್ಲಬ್‍ಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಆಟಗಾರರು ಒಂಚೂರು ಅಹಂವಿಲ್ಲದೆ ದೇಶದ ಪರ ಆಡುತ್ತಿದ್ದಾರೆ. ಗಾಯದ ಸಮಸ್ಯೆ ಬಿಟ್ಟು ಇನ್ನುಳಿದಂತೆ ಪ್ರತಿಯೊಬ್ಬರು ರಾಷ್ಟ್ರೀಯ ತಂಡದ ಪರ ಆಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಅಲ್ಲದೆ ಬಿಡುವಿನ ವೇಳೆಯಲ್ಲಿ ಎನ್‍ಟಿಎಸ್ ಅಕಾಡೆಮಿಗೆ ಭೇಟಿಕೊಟ್ಟು ಯುವ ಆಟಗಾರರ ಜೊತೆ ಬೆರೆಯುತ್ತಾರೆ. ಮುಖ್ಯವಾಗಿ ತಂಡದಲ್ಲಿನ ಒಗ್ಗಟ್ಟು, ಹೊಂದಾಣಿಕೆ, ಆಟದ ಮೇಲಿನ ಪ್ರೀತಿ, ನಂಬಿಕೆ ಮತ್ತು ದೇಶದ ಮೇಲಿನ ಗೌರವವೇ ನಾರ್ವೆ ತಂಡದ ಶಕ್ತಿ.
ಏನಿದು ವೈಕಿಂಗ್ಸ್ ಸ್ಟೈಲ್ ಸಂಭ್ರಮ..? 🥁
ವೈಕಿಂಗ್ಸ್ ಸ್ಟೈಲ್.. ಇದು ಕೇವಲ ಸಂಭ್ರಮವಲ್ಲ. ಇದು ನಾರ್ವೆ ದೇಶದ ಇತಿಹಾಸ ಮತ್ತು ಹೆಮ್ಮೆಯ ಸಂಕೇತ. ಸಾವಿರಾರು ವರ್ಷಗಳ ಹಿಂದೆ ಸಮುದ್ರಯಾನ ಮಾಡಿ ನಾರ್ವೆ ದೇಶವನ್ನು ಕಟ್ಟಿದ್ದ ತಮ್ಮ ಪೂರ್ವಜರಾದ ವೈಕಿಂಗ್ ಯೋಧರಿಗೆ ಗೌರವದ ಪ್ರತೀಕವಾಗಿದೆ..
ಅಭಿಮಾನಿಗಳು ಒಟ್ಟಾಗಿ ಕೈ ಎತ್ತಿ ಚಪ್ಪಾಳೆ ತಟ್ಟುತ್ತಾ, ದೋಣಿ ಹುಟ್ಟು ಹಾಕುವ ರೀತಿಯಲ್ಲಿದೆ ಈ ಸಂಭ್ರಮ. ಒಬ್ಬ ಒಂದು ಬಾರಿ ಡೋಲು ಬಾರಿಸುತ್ತಾನೆ. ಅದಕ್ಕೆ ಅಭಿಮಾನಿಗಳು ಜೋರಾಗಿ ಹುಹ್ ಅಂತ ಕೂಗುತ್ತಾರೆ. ನಂತರ ವೇಗವಾಗಿ ಡೋಲು ಬಾರಿಸುವಾಗ ಅಭಿಮಾನಿಗಳ ಕೂಗು ಇಡೀ ಕ್ರೀಡಾಂಗಣದಲ್ಲಿ ಯುದ್ಧದ ಘೋಷಣೆಯಂತೆ ಕೇಳಿಬರುತ್ತದೆ. ಸದ್ಯ ಫಿಫಾ ವಿಶ್ವಕಪ್‍ನಲ್ಲಿ ನಾರ್ವೆ ತಂಡ ವೈಕಿಂಗ್ಸ್ ಯೋಧರಂತೆ ಹೋರಾಟ ನಡೆಸುತ್ತಿದೆ. ಇದೀಗ ಕ್ವಾರ್ಟರ್ ಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ.
ಒಟ್ಟಿನಲ್ಲಿ ನಮ್ಮ ಬೆಂಗಳೂರಿನ ಅರ್ಧಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಾರ್ವೆಯಲ್ಲಿ ಫುಟ್‍ಬಾಲ್ ಕ್ರಾಂತಿಯಾಗುತ್ತದೆ. ಆದ್ರೆ ನಮ್ಮ ಬೆಂಗಳೂರಿನ ಅಶೋಕನಗರದಲ್ಲಿರುವ ಏಕೈಕ ಫುಟ್‍ಬಾಲ್ ಮೈದಾನ ಇನ್ನೂ ಶಿಥಿಲಾವಸ್ಥೆಯಲ್ಲಿದೆ. ಅಚ್ಚರಿಯಾಗುವುದು ನಮಗಿಂತ ಸಣ್ಣ ರಾಷ್ಟ್ರಗಳು, ಬಡರಾಷ್ಟ್ರಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಆದ್ರೆ ನಮ್ಮಲ್ಲಿ ಎಲ್ಲವೂ ಇದ್ದು ಇಲ್ಲಾದಂತಗಿದೆ. ನಾವು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಫಿಫಾ ವಿಶ್ವಕಪ್‍ನಲ್ಲಿ ಬೇರೆ ರಾಷ್ಟ್ರದವರು ಆಡುವುದನ್ನು ನೋಡಿ ಎಂಜಾಯ್ ಮಾಡುತ್ತೇವೆ. ಆದ್ರೆ ನಮ್ಮ ದೇಶ ಯಾವಾಗ ಫಿಫಾ ಅಂಗಣದಲ್ಲಿ ಆಡುವುದು ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.
ಸನತ್ ರೈ.








