ಇಂದು ಬಿಜೆಪಿಯ 40ನೇ ಸಂಸ್ಥಾಪನ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. ಕೊರೊನಾ ವಿರುದ್ಧದ ಈ ಸಮರ ಸುದೀರ್ಘವಾದದ್ದು, ಆದ್ರೆ ಈ ಯುದ್ಧದಿಂದ ನಾವು ಸುಸ್ತಾಗಬಾರದು ಅಥವಾ ವಿಶ್ರಾಂತಿಯನ್ನೂ ನಿರೀಕ್ಷಿಸಬಾರದು. ಕೊರೊನಾ ವಿರುದ್ಧದ ಈ ಸಮರವನ್ನು ಗೆಲ್ಲಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ.
ಈ ಇದೇ ವೇಳೆ ಪಿಎಂ ಕೇರ್ಸ್ ಫಂಡ್ ಗೆ ಸಹಾಯ ಮಾಡಿ ಎಂದು ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಹಿಂದೆ ನಮ್ಮ ತಾಯಂದಿರು, ಸಹೋದರಿಯರು ಯುದ್ಧದ ಸಂದರ್ಭದಲ್ಲಿ ತಮ್ಮ ಆಭರಣಗಳನ್ನು ನೀಡ್ತಿದ್ರು. ಈಗಿರುವಂತಹ ಸ್ಥಿತಿ ಕೂಡ ಯುದ್ಧದಂತೆಯೇ ಇದೆ. ಹೀಗಾಗಿ ಬಿಜೆಪಿಯ ಕಾರ್ಯಕರ್ತರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಪಿಎಂ ಪರಿಹಾರ ನಿಧಿಗೆ ಪ್ರತಿಯೊಬ್ಬರೂ ಕೈಲಾದ ಕೊಡುಗೆ ನೀಡಿ ಎಂದಿದ್ದಾರೆ.
ದೇಶ ಮಾತ್ರವಲ್ಲದೇ ಇಡೀ ದೇಶವೇ ಕಠಿಣ ಪರಿಸ್ಥಿತಿಯಲ್ಲಿರುವ ಈ ಹೊತ್ತಿನಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಕೂಡ ಬಂದಿದೆ. ಮಾನವೀಯತೆ ಅತ್ಯಂತ ದೊಡ್ಡ ಸಮಸ್ಯೆ ಎದುರಿಸುತ್ತಿದ್ದು, ದೇಶ ಸೇವೆಯ ಬಗೆಗಿನ ನಮ್ಮ ಭಕ್ತಿ ಈ ಸವಾಲಿನ ಸಮಯದಲ್ಲಿ ನಮ್ಮ ಹಾದಿಯನ್ನು ತೋರಿಸುತ್ತದೆ. ಕಠಿಣ ಪರಿಸ್ಥಿತಿಯನ್ನು ಭಾರತ ಎದುರಿಸುವ ಕ್ರಮವನ್ನು ನೋಡಿ ಭಾರತೀಯರ ಮಾತ್ರವಲ್ಲದೇ ವಿಶ್ವಆರೋಗ್ಯಸಂಸ್ಥೆ ಕೂಡ ಶ್ಲಾಘಿಸುತ್ತಿದೆ. ಈ ಮಹಾಮಾರಿಯನ್ನು ಹೊಡೆದೋಡಿಸಲು ವಿಶ್ವದ ಎಲ್ಲ ರಾಷ್ಟ್ರಗಳೂ ಕೈ ಜೋಡಿಸಬೇಕು. ಈ ಹೋರಾಟದಲ್ಲಿ ಭಾರತ ಅತ್ಯಂತ ಸಕ್ರಿಯವಾಗಿದ್ದು, ಸಾರ್ಕ್ ಮತ್ತು ಜಿ20 ದೇಶಗಳೊಡನೆ ಕೂಡಿ ಚರ್ಚೆ ನಡೆಸಿದೆ ಎಂದು ಹೇಳಿದರು.








