ಮೈಸೂರು: ಮುಡಾ ಪ್ರಕರಣಕ್ಕೆ (MUDA Case) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ನಂತರ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ (FIR) ದಾಖಲಿಸಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ದೂರಿನ ಆಧಾರದ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಪೊಲೀಸರು (Lokayukta Police) ಸಿಎಂ ಮತ್ತು ಇನ್ನಿತರರರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಸಿಆರ್ ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಂದು ಎಫ್ ಐಆರ್ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (A1), ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2), ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3), ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) ಸೇರಿದಂತೆ ಇನ್ನಿತರರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ತಡೆ ಕಾಯ್ದೆ 1988, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲು, ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು, ಸೆಕ್ಷನ್ 403 ಆಸ್ತಿಯ ದುರ್ಬಳಕೆ, ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ, ಸೆಕ್ಷನ್ 420 ವಂಚನೆ, ಸೆಕ್ಷನ್ 426 ದುಷ್ಕೃತ್ಯವೆಸಗುವುದು, ಸೆಕ್ಷನ್ 465 ಫೋರ್ಜರಿ, ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ, ಸೆಕ್ಷನ್ 340 ಅಕ್ರಮ ಬಂಧನ, ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು ಸೆಕ್ಷನ್ ಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಎಫ್ ಐಆರ್ ದಾಖಲಿಸಿದ ಲೋಕಾಯುಕ್ತ, ಸಿಎಂ ಅವರನ್ನು ವಿಚಾರಣೆಗೊಳಪಡಿಸಬಹುದು. ಅಲ್ಲದೇ, ಲೋಕಾಯುಕ್ತಕ್ಕೆ ವಶಕ್ಕೆ ಪಡೆಯುವ ಅಧಿಕಾರವೂ ಇದೆ. ಹೀಗಾಗಿ ಸಿಎಂ ಕಾನೂನು ತಜ್ಞರೊಂದಿಗೆ ಚರ್ಚಿಸಿ ಜಾಮೀನು ಪಡೆಯಬಹುದು.