ಕೊರೊನಾ ಸೋಂಕಿಗೆ ಚಿತ್ರನಟ ಸುರೇಶ್ ಚಂದ್ರ ಬಲಿ suresh-chandra
ಬೆಂಗಳೂರು : ಹೆಮ್ಮಾರಿ ಕೊರೊನಾ ವೈರಸ್ ಗೆ ಹಿರಿಯ ಪತ್ರಕರ್ತ ಹಾಗೂ ಚಿತ್ರನಟ ಸುರೇಶ್ ಚಂದ್ರ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರೇಶ್ ಚಂದ್ರ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು.
ಅವರು, ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದಾರೆ.
ಅವರ ನಿಧನಕ್ಕೆ ಚಂದನವನ ಕಂಬನಿ ಮಿಡಿಯುತ್ತಿದೆ.
80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್ಚಂದ್ರ ಅವರು ಚಂದನವನದ ಶಂಕರ್ನಾಗ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ್ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ನಟ, ನಿರ್ದೇಶಕ ಎಸ್.ನಾರಾಯಣ್ ಅವರ ಆಹ್ವಾನದ ಮೇರೆಗೆ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಪೋಷಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡ ಸುರೇಶ್ಚಂದ್ರ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.