ಮಾ.1ರಿಂದ ಬದಲಾಗಲಿವೆ ಜನರ ಮೇಲೆ ಪರಿಣಾಮ ಬೀರುವ ಹಣಕಾಸಿನ ನಿಯಮಗಳು
ನವದೆಹಲಿ : ಇದೇ ಮಾರ್ಚ್ 1 ರಿಂದ ಹಣಕಾಸಿನ ನಿಯಮಗಳಲ್ಲಿ ಕೆಲ ಬದಲಾವಣೆಗಳು ಆಗಲಿದ್ದು, ಬೆಲೆ ಏರಿಕೆ, ಕೊರೊನಾ ಸಂಕಷ್ಟ, ನಿರುದ್ಯೋಗ ಮಧ್ಯೆ ಸಿಲುಕಿ ಒದ್ದಾಡುತ್ತಿರುವ ಜನ ಸಾಮಾನ್ಯರ ನಿತ್ಯ ಜೀವನದ ಮೇಲೆ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ.
ಮಾರ್ಚ್ ಒಂದರಿಂದ ಎಲ್‍ಪಿಜಿ ಸಿಲಿಂಡರ್ ದರ, ಇಂಧನ ಬೆಲೆ, ಎಟಿಎಂ ಕ್ಯಾಶ್ ವಿತ್ ಡ್ರಾ, ಫಾಸ್ಟ್ ಟ್ಯಾಗ್ ಸೇರಿದಂತೆ ವಿಷಯಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಮತ್ತು ನಡುವಳಿಗಳು ಜಾರಿಗೆ ಬರಲಿವೆ.
ಮಾರ್ಚ್ 1 ರಿಂದ ಬದಲಾಗಲಿರುವ ಕೆಲವು ವಿಷಯಗಳು
ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟು ಬರಲ್ಲ
ಹೌದು..! ಮಾರ್ಚ್ 1 ರಿಂದ ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳು ಇರುವುದಿಲ್ಲ. ಗ್ರಾಹಕರು ಎಟಿಎಂಗಳಿಂದ 2000 ರೂ ನೋಟುಗಳಲ್ಲಿ ಹಣ ಹಿಂತೆಗೆದುಕೊಂಡ ಬಳಿಕ ಸಣ್ಣ ಶಾಖೆಯ ಕರೆನ್ಸಿ ನೋಟುಗಳಿಗಾಗಿ ಅವುಗಳನ್ನ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಗಳಿಗೆ ಬರ್ತಾರೆ. ಇದನ್ನ ತಪ್ಪಿಸಲು ಎಟಿಎಂ ಗಳಲ್ಲಿ 2000 ರೂಪಾಯಿ ನೋಟುಗಳ ಭರ್ತಿ ನಿಲ್ಲಿಸಲು ಇಂಡಿಯನ್ ಬ್ಯಾಂಕ್ ನಿರ್ಧರಿಸಿದೆ.
ಎಸ್‍ಬಿಐ ಗ್ರಾಹಕರಿಗೆ ಕೆವೈಸಿ ಕಡ್ಡಾಯ :
ನೀವು ಎಸ್ ಬಿಐ ನ ಗ್ರಾಹಕರಾಗಿದ್ದರೇ ತಕ್ಷಣವೇ ಕೆವೈಸಿ ಪೂರ್ಣಗೊಸಬೇಕು. ಇಲ್ಲವಾದಲ್ಲಿ ನಿಮ್ಮ ಖಾತೆ ನಿಷ್ಕ್ರಿಯೆಗೊಳ್ಳುವ ಸಾಧ್ಯತೆಗಳಿವೆ. ನೀವು ನಿಮ್ಮ ಖಾತೆಗಳನ್ನು ಸಕ್ರಿಯವಾಗಿಡಲು ಬಯಸಿದರೇ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ. ಅಂದಹಾಗೆ ಎಸ್ ಬಿಐ ಗ್ರಾಹಕರಿಗೆ ಈಗಾಗಲೇ ಈ ಸಂಬಂಧ ಇಂದು ಸಂದೇಶ ಮೇಲ್ ಐಡಿಗೆ ಬಂದಿರಬಹುದು.
ಎಲ್ ಪಿಜಿ ದರ ಏರಿಕೆ ಸಾಧ್ಯತೆ :
ಈಗಾಗಲೇ ಎಲ್ ಪಿಜಿ ದರ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಜನ ಮತ್ತೆ ಕಟ್ಟಿಗೆ ಒಲೆಯತ್ತ ಮುಖಮಾಡುತ್ತಿದ್ದಾರೆ. ಈ ಮಧ್ಯೆ ಮಾರ್ಚ್ ಒಂದರಂದು ತೈಲ ಮಾರುಕಟ್ಟೆ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್ ಗಳ ಹೊರ ದರಗಳನ್ನು ಪ್ರಕಟಿಸಲಿವೆ. ಇದು ಪ್ರತಿ ತಿಂಗಳು ನಡೆಯುವ ಪ್ರತಿಕ್ರಿಯೆ. ಸದ್ಯ 14.2 ಕೆಜಿ ಸಿಲಿಂಡರ್ ರಾಷ್ಟ್ರ ರಾಜಧಾನಿಯಲ್ಲಿ 794 ರೂ. ಇದೆ.
ಇಂಧನ ದರ :
ಪೆಟ್ರೋಲ್ ಡಿಸೇಲ್ ಬೆಲೆ ಈಗಾಗಲೇ ಸಾರ್ವಕಾಲಿಕ ಗರಿಷ್ಠಮಟ್ಟ ತಲುಪಿಯಾಗಿದೆ. ಸರ್ಕಾರಕ್ಕೆ ಶಾಪ ಹಾಕುತ್ತಲೇ ಜನರ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಇಂಧನದ ಚಿಲ್ಲರೆ ದರ ಪರಿಷ್ಕರಿಸಲಾಗುತ್ತಿದೆ. ಅದರಂತೆ ದಿನಂಪ್ರತಿ ತೈಲ ಬೆಲೆ ಏರಿಕೆ ಆಗುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಳಿಗಾಲ ಮುಗಿಯುತ್ತಿದ್ದಂತೆ ಬೆಲೆ ಕಡಿಮೆಯಾಗಲಿದೆ. ಇದು ಅಂತಾರಾಷ್ಟ್ರೀಯ ವಿಷಯವಾಗಿದೆ, ಬೇಡಿಕೆಯ ಹೆಚ್ಚಳದಿಂದಾಗಿ ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ದರ ಏರಿಕೆ ಸೀಸನ್ ಕೊನೆಗೊಳ್ಳುತ್ತದೆ ಎಂದಿದ್ದಾರೆ. ಹೀಗಾಗಿ ಮಾರ್ಚ್‍ನಲ್ಲಿ ತೈಲ ಬೆಲೆ ಕಡಿಮೆ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಟೋಲ್ ಪ್ಲಾಜಾಗಳಲ್ಲಿ ಉಚಿತ ಫಾಸ್ಟ್ ಟ್ಯಾಗ್ ಅಂತ್ಯ :
ಹೌದು..! ಈ ತಿಂಗಳ ಅಂತ್ಯಕ್ಕೆ ಫಾಸ್ಟ್ ಟ್ಯಾಗ್ ಅಂತ್ಯವಾಗಲಿದೆ. ಹೀಗಾಗಿ ಗ್ರಾಹಕರು ಮಾರ್ಚ್ 1 ರಿಂದ ಟೋಲ್ ಪ್ಲಾಜಾಗಳಿಂದ ಫಾಸ್ಟ್ ಟ್ಯಾಗ್ ಖರೀದಿಸಬೇಕಾಗುತ್ತದೆ.
