ಹುಲ್ಲಿನ ಶಾಲೆಗೆ ಬೆಂಕಿ : 26 ವಿದ್ಯಾರ್ಥಿಗಳು ಸಾವು
ನೈಜರ್ : ಶಾಲೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡು 26 ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪಶ್ಚಿಮ ಆಫ್ರಿಕಾದ ನೈಜರ್ ನ ಮರಡಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಹಲವಾರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ 3ರಿಂದ 8 ವರ್ಷ ವಯೋಮಿತಿಯ ಮಕ್ಕಳು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ನೈಜರ್ ನ ಮರಡಿಯಲ್ಲಿ ಒಣಹುಲ್ಲು ಮತ್ತು ಕಟ್ಟಿಗೆಗಳಿಂದ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ತಾತ್ಕಾಲಿಕ ಶಾಲೆಗಳನ್ನಾಗಿ ಬಳಸಲಾಗುತ್ತಿದೆ.
ಮೊದಲು ಮೂರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ನಂತರ ಎಲ್ಲಾ ಗುಡಿಸಲುಗಳಿಗೆ ವ್ಯಾಪಿಸಿದೆ.
ಪರಿಣಾಮ ಸಂಪೂರ್ಣವಾಗಿ ಹೊಗೆ ತುಂಬಿಕೊಂಡಿದ್ದು, 26 ಮಕ್ಕಳು ಬೆಂಕಿಗೆ ಆಹುತಿಯಾಗಿದ್ದಾರೆ.
ಇನ್ನು ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.