ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆ…. ಲಾಕ್ ಡೌನ್ ಹೇರಿದ ಕಿಮ್ ಜಾಂಗ್
1 min read
ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆ…. ಲಾಕ್ ಡೌನ್ ಹೇರಿದ ಕಿಮ್ ಜಾಂಗ್
ಎರಡು ವರ್ಷಗಳಲ್ಲಿ ವಿಶ್ವದ ಮೂಲೆ ಮೂಲೆಗೂ ಹರಡಿದ್ದ ಕರೋನಾ ಆ ಒಂದು ದೇಶಕ್ಕೆ ಎಂಟ್ರಿ ಕೊಡಲು ಹಿಂದೇಟು ಹಾಕುತ್ತಿತ್ತು. ಅದು ಉತ್ತರ ಕೋರಿಯಾ. ಇದೀಗ ಬಂದಿರುವ ಸುದ್ದಿಯ ಪ್ರಕಾರ ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ.
2019 ರ ಅಂತ್ಯದಲ್ಲಿ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕರೋನಾ ಊರನ್ನೆಲ್ಲ ಸುತ್ತಿ ಬಂದು ಲಾಕ್ ಡೌನ್ ಹೇರಿಕೆ ಮಾಡಿತ್ತು. ಇದು ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ.
ಆದರೆ ಈ ಎರಡು ವರ್ಷಗಳಲ್ಲಿ ಉತ್ತರ ಕೊರಿಯಾದಲ್ಲಿ ಮಾತ್ರ ಒಬ್ಬ ವ್ಯಕ್ತಿಯಲ್ಲಿ ಕೂಡ ಪತ್ತೆಯಾಗಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ಅಲ್ಲಿಗೆ ಕೂಡ ಒಕ್ಕರಿಸಿದ್ದು ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಉತ್ತರ ಕೊರಿಯಾದ ಪಯೋಂಗ್‌ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ಜನರಿಂದ ಕಳೆದ ಭಾನುವಾರ ಸಂಗ್ರಹಿಸಲಾದ ಮಾದರಿಗಳ ಪರೀಕ್ಷೆ ನಡೆಸಿದಾಗ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢವಾಗಿದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೊನಾ ದೃಢಪಟ್ಟಿರುವ ವ್ಯಕ್ತಿ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ನಂತರ, ವ್ಯಕ್ತಿಯು ಓಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ.
ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ಪ್ರಕಾರ, ಮೊದಲ ಪ್ರಕರಣ ವರದಿಯಾದ ನಂತರ, ಕಿಮ್ ಜಾಂಗ್ ಉನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಉತ್ತರ ಕೊರಿಯಾದ ರಾಜಧಾನಿ ಪಯೋಂಗ್ಯಾಂಗ್ ಅನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ ಎಂಬ ಸುದ್ದಿ ಬರುತ್ತಿದೆ.
ಮೊದಲ ಒಮಿಕ್ರಾನ್ ಪ್ರಕರಣ ವರದಿಯಾದ ನಂತರ ಉತ್ತರ ಕೊರಿಯಾದ ಗಡಿಯಲ್ಲಿ ಕಣ್ಗಾವಲು ಬಿಗಿಗೊಳಿಸಲಾಗಿದೆ. ಹೊರಗಿನಿಂದ ಬರುವವರ ಬಗ್ಗೆ ತೀವ್ರ ತನಿಖೆ ನಡೆಸಬೇಕು ಎಂದು ಕಿಮ್ ಜಾಂಗ್ ಉನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.