ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ : ಮೇ 2 ರಂದು ಫಲಿತಾಂಶ
ನವದೆಹಲಿ : ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ ಮಾಡಿದೆ. ಐದು ರಾಜ್ಯಗಳಲ್ಲಿ ಒಟ್ಟು 18.68 ಕೋಟಿ ಮತದಾರರು ವೋಟ್ ಮಾಡಲಿದ್ದು, 2.7 ಲಕ್ಷ ವೋಟಿಂಗ್ ಕೇಂದ್ರ ಇರಲಿವೆ. ಕೋವಿಡ್ ಕಾರಣ ಒಂದು ಗಂಟೆ ಹೆಚ್ಚು ಮತದಾನಕ್ಕೆ ಅವಕಾಶ ನೀಡಲಾಗಿದೆ. ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರ, ತಮಿಳುನಾಡು 234, ಕೇರಳದಲ್ಲಿ 140 ಸ್ಥಾನ, ಅಸ್ಸೋಂದಲ್ಲಿ 126 ಕ್ಷೇತ್ರ ಹಾಗೂ ಅಸ್ಸೋಂನಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ಪ್ರಚಾರಕ್ಕೆ ಹೊಸ ನಿಯಮಗಳು ಇಂತಿವೆ
1) ಮನೆಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ ಐವರು ತೆರಳಬಹುದು.
2) ಬಹಿರಂಗ ಸಭೆಗಳಿಗೆ ಅವಕಾಶವಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ
3) ಬಹಿರಂಗ ಸಭೆಗಳಿಗೆ ಮೈದಾನಗಳನ್ನು ಮೊದಲೇ ಗುರುತಿಸಿ ಅಧಿಕಾರಿಗಳು ಪ್ರಕಟಿಸುತ್ತಾರೆ.
4) ಐದು ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿ
ಚುನಾವಣೆ ನಡೆಯುವ ದಿನಾಂಕ ಮತ್ತು ವಿವರ
ಪಶ್ಚಿಮ ಬಂಗಾಳ ಚುನಾವಣೆದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತ, ಏಪ್ರಿಲ್ 1 ರಂದು ಎರಡನೇ ಹಂತ, ಏ 6 ರಂದು ಮೂರನೇ ಹಂತ, ಏಪ್ರಿಲ್ 10 ರಂದು 4ನೇ ಹಂತದ ಮತದಾನ, ಏಪ್ರಿಲ್ 17 ರಂದು 5 ನೇ ಹಂತದ ಮತದಾನ, 22 ರಂದು ಆರನೇ ಹಂತ, 26 ರಂದು 7 ನೇ ಹಂತದ ಮತದಾನ ಹಾಗೂ 29 ರಂದು ಕೊನೆಯಹಂತದ ಮತದಾನ ನಡೆಯಲಿದೆ. ಮೇ 2 ರಂದು ಚುನಾವಣಾ ಫಲಿತಾಂಶ ಬರಲಿದೆ.
ಅಸ್ಸಾಂ ಚುನಾವಣೆ : ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ಕ್ಕೆ ಮೊದಲ ಹಂತ, ಏಪ್ರಿಲ್ 1ಕ್ಕೆ ಎರಡನೇ ಹಂತ, ಏಪ್ರಿಲ್ 6ಕ್ಕೆ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮೇ 2 ಚುನಾಣಾ ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು ಚುನಾವಣೆ: ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 12ನೇ ಮಾರ್ಚ್ ಅಧಿಸೂಚನೆ ಹೊರಬರಲಿದ್ದು, 19ನೇಮಾರ್ಚ್ 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 6ನೇ ತಾರೀಕು ಚುನಾವಣೆ ನಡೆಯಲಿದ್ದು, ಕನ್ಯಾಕುಮಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಕೂಡ ಏ. 6ರಂದು ನಡೆಯಲಿದೆ. ಮೇ 2 ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕೇರಳ ಚುನಾವಣೆ: ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಇದೇ ವೇಳೆ ಮಲ್ಲಾಪುರ ಸಂಸತ್‍ಗೆ ಉಪ ಚುನಾವಣೆಯು ಕೂಡ ಏಪ್ರಿಲ್ 6ರಂದು ನಡೆಯಲಿದೆ.
ಪುದುಚೇರಿ ಚುನಾವಣೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.
