ಶಿವಮೊಗ್ಗ ಜಿಲ್ಲೆಗೆ ವಿಮಾನ ಸೇವೆ ಆರಂಭವಾಗಿದೆ.
ಇಂದು ಮೊದಲ ವಿಮಾನ ತೆರಳಿದ್ದು, ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಸಚಿವ ಎಂಬಿ ಪಾಟೀಲ್ (MB Patil) ಜೊತೆ ಆ ಭಾಗದ ಜನ ಪ್ರತಿನಿಧಿಗಳು ಪ್ರಯಾಣಿಸಿದ್ದರು. ಶಿವಮೊಗ್ಗದಲ್ಲಿ ಇಳಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತಿಸಲಾಯಿತು. ಗಣ್ಯರನ್ನು ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಸ್ವಾಗತಿಸಿದರು.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರು ಕಾರಣ. ಸಣ್ಣ ಸಮಸ್ಯೆ ಇಲ್ಲದೇ ಜಮೀನು ನೀಡಿದ್ದಾರೆ. ಇವತ್ತು ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಇದರಿಂದಾಗಿ ಕೈಗಾರಿಕೆ ಸೇರಿದಂತೆ ಇನ್ನಿತರ ಕಾರಣಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದ ನಗರದಿಂದ 10 ಕಿ.ಮೀ ದೂರದಲ್ಲಿರುವ ಸೋಗಾನೆ ಹತ್ತಿರ ಇರುವ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.