ಆಗಸದಲ್ಲಿ ತೇಲಾಡುತ್ತಾ ಪಾತಾಳಕ್ಕೆ ಬಿದ್ದ ಡ್ರೋನ್ ಪ್ರತಾಪ್…?
ಬೆಂಗಳೂರು, ಜುಲೈ 11: ಡ್ರೋನ್ ಬಾಯ್ ಪ್ರತಾಪ್ ಎಂಬಾತ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದ ಯುವ ವಿಜ್ಞಾನಿ. ಈತ ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾನೆ ಎಂದೂ, 87 ದೇಶಗಳು ಈತನಿಗೆ ಆಹ್ವಾನ ನೀಡಿವೆಯೆಂದೂ, ಭಾರತೀಯ ಸರ್ಕಾರ ಹೊರತುಪಡಿಸಿ ವಿವಿಧ ಸರ್ಕಾರಗಳು ಈತನಿಗೆ ಕೆಲಸ ನೀಡಲು ಮುಂದೆ ಬಂದಿವೆ ಎಂದೂ, ಪ್ರಧಾನಿ ಮೋದಿ ಸಹ ಅವನನ್ನು ನೇಮಕ ಮಾಡಲು ಡಿಆರ್ಡಿಪಿಯನ್ನು ಕೇಳಿದ್ದಾರೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಈತನ ಸಾಧನೆಯ ಬಗ್ಗೆ ಸುದ್ದಿ ಹುಟ್ಟಿತ್ತು. ಆದರೆ ಈಗ ಅವೆಲ್ಲವೂ ಕಪೋಲಕಲ್ಪಿತ ಕಥೆಗಳೆಂದು ತಿಳಿದು ಬಂದಿದೆ.
2018 ರಲ್ಲಿ ಪ್ರತಾಪ್ ಜರ್ಮನಿಯ ಹ್ಯಾನೋವರ್ನಲ್ಲಿ ನಡೆದ ಇಂಟರ್ನ್ಯಾಷನಲ್ ಡ್ರೋನ್ ಎಕ್ಸ್ಪೋ-2018 ರಲ್ಲಿ ಮತ್ತು ಡಿಸೆಂಬರ್ 2017 ರಲ್ಲಿ ಜಪಾನ್ ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ರೊಬೊಟಿಕ್ ಪ್ರದರ್ಶನದಲ್ಲಿ ಚಿನ್ನದ ಪದಕವನ್ನು ಗೆದ್ದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಆದರೆ ಅದನ್ನು ಪರಿಶೀಲಿಸಿದಾಗ ಅದೆಲ್ಲಾ ಸುಳ್ಳು ಎಂದು ತಿಳಿದು ಬಂದಿದೆ.
ಜರ್ಮನಿಯ ಹ್ಯಾನೋವರ್ ನಲ್ಲಿ ನಡೆದಿರುವುದು ಕಂಪ್ಯೂಟರ್ ಎಕ್ಸ್ಪೋ ಆಗಿದ್ದು, ಅಲ್ಲಿ ಯಾವುದೇ ಅಂತರರಾಷ್ಟ್ರೀಯ ಡ್ರೋನ್ ಎಕ್ಸ್ಪೋ ನಡೆದಿರುವ ಬಗ್ಗೆ ವರದಿಗಳಿಲ್ಲ. ಅಲ್ಲದೇ
ಪ್ರತಾಪ್ ಎಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದರು ಎಂಬ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ಎಕ್ಸ್ಪೋ ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಬಗ್ಗೆ ಯಾವುದೇ ಸ್ವತಂತ್ರ ವರದಿಗಳಿಲ್ಲ. ಸಿಬಿಐಟಿ ಸಮಾರಂಭದಲ್ಲಿ ಸಿಬಿಐಟಿ ಇನ್ನೋವೇಶನ್ ಪ್ರಶಸ್ತಿಯನ್ನು ನೀಡಲಾಗಿದ್ದರೂ, ಪ್ರತಾಪ್ ಆ ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ಯಾವುದೇ ವರದಿಯಿಲ್ಲ. ಈ ಹಿಂದೆ ಪ್ರಶಸ್ತಿ ಗೆದ್ದಿರುವ ಎಲ್ಲಾ ನಾಮನಿರ್ದೇಶಿತರು ಮತ್ತು ಪ್ರಶಸ್ತಿ ವಿಜೇತರು ಮೊಟೊರೊಲಾ, ಮ್ಯಾಕ್ಅಕ್ಫೀ ಮುಂತಾದ ಕಂಪನಿಗಳು ಮಾತ್ರವಾಗಿದ್ದು, ಯಾವುದೇ ವ್ಯಕ್ತಿ ಪ್ರಶಸ್ತಿ ಗೆದ್ದ ವರದಿಗಳಿಲ್ಲ. ಅಲ್ಲದೇ ಪ್ರತಾಪ್ ಗೆದ್ದಿದ್ದಾರೆ ಎಂದು ಹೇಳಲಾಗಿರುವ ಆಲ್ಬರ್ಟ್ ಐನ್ಸ್ಟೈನ್ ಇನ್ನೋವೇಶನ್ ಪ್ರಶಸ್ತಿಯ ಬಗ್ಗೆ ಬೇರೆ ಯಾವುದೇ ಮೂಲಗಳಿಂದ ಮಾಹಿತಿಯಿಲ್ಲ.
ಆಲ್ಬರ್ಟ್ ಐನ್ಸ್ಟೈನ್ ವರ್ಲ್ಡ್ ಅವಾರ್ಡ್ ಆಫ್ ಸೈನ್ಸ್ ಎಂಬ ಪ್ರಶಸ್ತಿ ಇದೆಯಾದರೂ, ವಿಜೇತರ ಪಟ್ಟಿ ಪ್ರತಾಪ್ ನ ಹೆಸರನ್ನು ಒಳಗೊಂಡಿಲ್ಲ. ಅಷ್ಟೇ ಅಲ್ಲ ಈ ಪ್ರಶಸ್ತಿಯನ್ನು ಸಿಬಿಐಟಿ ನೀಡುವುದಿಲ್ಲ. ಆದರೆ ಪ್ರತಾಪ್ ಅವರು ಗೆದ್ದಿರುವ ಪದಕ ಮತ್ತು ಆಲ್ಬರ್ಟ್ ಐನ್ಸ್ಟೈನ್ ಇನ್ನೋವೇಶನ್ ಮೆಡಲ್ ನಲ್ಲಿ ಸಿಬಿಐಟಿಯಿಂದ ನೀಡಲಾಗಿರುವ ಪ್ರಮಾಣಪತ್ರ ಎಂಬ ಉಲ್ಲೇಖವಿದೆ.
ಟೋಕಿಯೊದಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೋಟ್ ಪ್ರದರ್ಶನವು ವ್ಯಾಪಾರ ಮೇಳವಾಗಿದ್ದು, ಅಲ್ಲಿ ರೋಬೋಟ್ ಗಳನ್ನು ತಯಾರಿಸುವ ಕಂಪನಿಗಳು ತಮ್ಮ ರೋಬೋಟ್ ಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಹ ಪ್ರದರ್ಶನದಲ್ಲಿ ಭಾಗವಹಿಸಿ ತಾವು ತಯಾರಿಸಿದ ರೋಬೋಟ್ ಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಯಾವುದೇ ಡ್ರೋನ್ಗಳು ಬಂದ ಬಗ್ಗೆ ದಾಖಲೆಗಳಿಲ್ಲ ಮತ್ತು ಸ್ಪರ್ಧೆಯಲ್ಲಿ ಪ್ರತಾಪ್ ಪ್ರಥಮ ಬಹುಮಾನ ಅಥವಾ ಯಾವುದೇ ಬಹುಮಾನವನ್ನು ಗೆದ್ದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಅಷ್ಟೇ ಅಲ್ಲ ಆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ರೋಬೋಟ್ ಗಳನ್ನು ಪ್ರದರ್ಶಿಸಬಹುದಾದರೂ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ತನ್ನ ಡ್ರೋನ್ ಗಾಗಿ ಹಲವಾರು ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಗೆದ್ದಿದ್ದಾನೆ ಎಂದು ಹೇಳಲಾಗುತ್ತಿದ್ದರೂ, ಪ್ರಶಸ್ತಿಗಳನ್ನು ಸ್ವೀಕರಿಸುವ ಒಂದೇ ಒಂದು ಫೋಟೋ ಅಥವಾ ವೀಡಿಯೋವಿಲ್ಲ. ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಷನ್ ಬಳಸಿ 600 ಡ್ರೋನ್ಗಳನ್ನು ತಯಾರಿಸಿದ ಡ್ರೋನ್ ಬಾಯ್ ಪ್ರತಾಪ್ ಬಳಿ ಕೆಲವು ಫೋಟೋಗಳು ಇದ್ದರೂ ಅವು ಬೇರೆ ಕಂಪನಿಯ ಡ್ರೋನ್ ಗಳ ಜೊತೆಗೆ ಹಿಂದೆ ನಿಂತಿರುವ ಫೋಟೋಗಳು.
ಜಪಾನ್ ಕಂಪನಿಯ ಕಮರ್ಷಿಯಲ್ ಪ್ರೊಡಕ್ಷನ್ ಡ್ರೋನ್ ಮುಂದೆ ನಿಂತು ಒಂದು ಫೋಟೋದಲ್ಲಿ ಪ್ರತಾಪ್ ಪೋಸ್ ನೀಡಿದ್ದಾನೆ. ಹಾಗಾಗಿ ಆ ಜಪಾನ್ ಕಂಪನಿಯನ್ನು ಎ.ಸಿ.ಎಸ್.ಎಲ್ ಗಾಗಿ ಪ್ರತಾಪ್ ಡ್ರೋನ್ ತಯಾರಿಸಿದ್ದಾರಾ ಎಂದು ಮೇಲ್ ನಲ್ಲಿ ಪ್ರಶ್ನಿಸಿದ್ದಾಗ ಪ್ರತಾಪ್ ಬಗ್ಗೆ ನಮಗೆ ತಿಳಿದಿಲ್ಲ. ಆತ ಕಂಪನಿಗಾಗಿ ಯಾವ ಡ್ರೋನ್ ಅನ್ನು ಕೂಡ ಡೆವಲಪ್ ಮಾಡಿಲ್ಲ. ಫೋಟೋದಲ್ಲಿ ಇರುವುದು ಡ್ರೋನ್ PF-1 ಆಗಿದ್ದು, ಅದು ಜಪಾನ್ ನಲ್ಲಿ ತಯಾರಾಗಿದೆ. ಅಷ್ಟೇ ಅಲ್ಲ ಅದಕ್ಕೆ ಪೇಟೆಂಟ್ ಮತ್ತು ರೈಟ್ಸ್ ಕೂಡ ಇದೆ’ ಎಂದು ಸ್ಪಷ್ಟನೆ ನೀಡಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ತನ್ನ ಡ್ರೋನ್ ಬಳಸಿ ಆಹಾರವನ್ನು ವಿತರಿಸಿದ್ದಾಗಿ ಪ್ರತಾಪ್ ಹೇಳಿಕೊಂಡಿದ್ದಾನೆ. ಆದರೆ ಡ್ರೋನ್ ಮೂಲಕ ಕಡಿಮೆ ತೂಕದ ವಸ್ತುಗಳನ್ನು ಮಾತ್ರ ಸಾಗಿಸಬಹುದಾಗಿದೆ ಹೊರತು ಪ್ರವಾಹದಂತ ಸಂದರ್ಭದಲ್ಲಿ ಆಹಾರ ವಿತರಿಸಲು ಸಾಧ್ಯವಿಲ್ಲ. ಪ್ರವಾಹ ಸಂದರ್ಭದಲ್ಲಿ ವೈಮಾನಿಕ ಸಮೀಕ್ಷೆಗೆ ಮಾತ್ರವೇ ಡ್ರೋನ್ ಬಳಕೆಯಾಗುತ್ತದೆ. ಪ್ರತಾಪ್ ನೀಡಿರುವುದು ಕಮರ್ಷಿಯಲ್ ಡ್ರೋನ್ ನ ಫೋಟೋ ಆಗಿದ್ದು, ತ್ಯಾಜ್ಯಗಳಿಂದ ತಯಾರಾದ ಡ್ರೋನ್ ಅಲ್ಲ.
ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಷನ್ ಚಿಪ್ಸ್, ಮೋಟಾರ್ ಮತ್ತು ರೆಸಿಸ್ಟರ್ ಮೂಲಕ ಡ್ರೋನ್ ನನ್ನು ನಾನು ನಿರ್ಮಿಸಿರುವುದಾಗಿ ಪ್ರತಾಪ್ ಹೇಳುತ್ತಿದ್ದರೂ, ಎಲೆಕ್ಟ್ರಿಕ್ ಪ್ರಾಡಕ್ಟ್ ನಲ್ಲಿರುವ ಚಿಪ್ ಗಳನ್ನು ಇತರೆ ಡಿವೈಸ್ ನಲ್ಲಿ ಬಳಸಲು ಸಾಧ್ಯವಿಲ್ಲ.
ತನ್ನ ಒಂದು ಡ್ರೋನ್ ಗೆ ಈಗಲ್ 2.8 ಎಂದು ಹೆಸರಿಟ್ಟಿರುವುದಾಗಿ ಪ್ರತಾಪ್ ಹೇಳಿಕೊಂಡಿದ್ದಾನೆ. ಆದರೆ ಗುಜರಾತ್ ನ 17 ವರ್ಷದ ಯುವಕ ಹರ್ಷವರ್ಧನ್ ಸಿನ್ಹ್ ಝಾಲಾ ಈಗಲ್ A7 ಎಂಬ ಡ್ರೋನ್ ನನ್ನು ಈ ಮೊದಲೇ ತಯಾರಿಸಿದ್ದಾನೆ. ಏರೋಬಾಟಿಕ್ಸ್-7 ಕಂಪನಿಯ ಸಿಇಓ ಮತ್ತು ಫೌಂಡರ್ ಆಗಿರುವ ಹರ್ಷವರ್ಧನ್ ತನ್ನ ಡ್ರೋನ್ ಮೂಲಕ ಲ್ಯಾಂಡ್ ಮೈನ್ಸ್ ಡಿಟೆಕ್ಟ್ ಮಾಡುತ್ತಾನೆ ಮತ್ತು ಹರ್ಷವರ್ಧನ್ ತಯಾರಿಸಿರುವ ಡ್ರೋನ್ ಫೋಟೋ ಮತ್ತು ವಿಡಿಯೋಗಳು ಆನ್ ಲೈನ್ ನಲ್ಲಿ ಲಭ್ಯವಿದೆ.
ಈ ಎಲ್ಲಾ ಅಂಶಗಳು ಡ್ರೋನ್ ಬಾಯ್ ಪ್ರತಾಪ್ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಜನರನ್ನು ನಂಬಿಸಿದ ಎಂದು ಸಾಬೀತು ಮಾಡುತ್ತಿವೆ.