ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪದ ಮೇರೆಗೆ ನಟಿ ಸಂಜನಾ ಆಪ್ತ ರಾಹುಲ್‍ನನ್ನು ಬಂಧಿಸಲಾಗಿದೆ. ಈಗ ವಿದೇಶಗಳಿಂದ ಡ್ರಗ್ಸ್ ತಂದು ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಸಿದ ಅವರು, ರಾಹುಲ್ ಮತ್ತು ಮತ್ತೊಬ್ಬ ಆರೋಪಿ ರವಿಶಂಕರ್ ಹೈಪ್ರೊಫೈಲ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಬ್ಬರಿಗೂ ಫಾರಿನ್ ಡ್ರಗ್ ಡೀಲರ್ ಜತೆ ಸಂಪರ್ಕ ಇದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ರವಿಶಂಕರ್ ಹಗೂ ರಾಹುಲ್‍ನನ್ನು ಬಂಧಿಸಲಾಗಿದೆ. ಡ್ರಗ್ಸ್ ಜಾಲದ ಬಗ್ಗೆ ಎನ್‍ಸಿಬಿ ತನಿಖೆಯೇ, ಸಿಸಿಬಿ ತನಿಖೆಯೇ ಬೇರೆ ಎಂದು ಸ್ಪಷ್ಟಪಡಿಸಿದ ಕಮಲ್‍ಪಂತ್, ಪ್ರಕರಣದ ತನಿಖೆ ತುಂಬಾ ಪ್ರೊಫೆಷನಲ್ ಆಗಿ ನಡೆಯುತ್ತಿದೆ. ಹೈಪ್ರೊಫೈಲ್ ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 12 ಜನರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ ಎಂದರು.
ಡ್ರಗ್ಸ್ ಪಾರ್ಟಿ ಆಯೋಜಕರ ವಿರುದ್ಧವೂ ತನಿಖೆ ನಡೆಯುತ್ತಿದೆ. ಈವರೆಗೆ ಯಾರೆಲ್ಲಾ ಭಾಗಿಯಾಗಿದ್ದರು, ಯಾರು ಆಯೋಜಿಸಿದ್ರು ಎಂಬುದರ ತನಿಖೆ ನಡೆಯುತ್ತಿದೆ. ಡ್ರಗ್ಸ್ ಪಾರ್ಟಿ ಹಿಂದೆ ಯಾರಿದ್ದಾರೆ ಹಾಗೂ ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರಿದ್ದಾರೆ ಎಂದು ಕಮಲ್‍ಪಂತ್ ಹೇಳಿದ್ದಾರೆ.
ಇದೇ ವೇಳೆ, ಸದ್ಯ ರಾಹುಲ್‍ನನ್ನು ಆರೋಗ್ಯ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.








