ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ರಾಜಕೀಯವಾಗಿ ಉತ್ತರ-ದಕ್ಷಿಣ ದ್ರುವದಂತಿದ್ದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ಮತ್ತೆ ಒಂದಾಗಿದ್ದಾರೆ.
ಹಲವು ವರ್ಷಗಳ ನಂತರ ಒಟ್ಟಾಗಿ ಕಾಣಿಸಿಕೊಡ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಡಿಸಿಸಿ ಬ್ಯಾಂಕ್ನಲ್ಲಿ ಮುಖಾಮುಖಿಯಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು. ಇಬ್ಬರೂ ಒಂದೇ ಸೋಫಾದಲ್ಲಿ ಕುಳಿತುಕೊಂಡು ಕೆಲಕಾಲ ಮಾತುಕತೆ ನಡೆಸಿದ್ದು ಗಮನಸೆಳೆಯಿತು.
ಈ ಇಬ್ಬರೂ ನಾಯಕರು ಒಂದೇ ವೇದಿಕೆಗೆ ಬರಬೇಕು ಮತ್ತು ವೈಮನಸ್ಸು ಮರೆತು ಒಂದಾಗುವ ಮೂಲಕ ಡಿಸಿಸಿ ಬ್ಯಾಂಕ್ನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಂತೆ ವರಿಷ್ಠರು ಸೂಚಿಸಿದ್ದರು. ಅದರಂತೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಪರಸ್ಪರ ಮಾತುಕತೆ ನಡೆಸಿದ್ದಾರೆ.
ಎರಡು ವರ್ಷಗಳ ಹಿಂದೆ ನಡೆದ ರಾಜ್ಯದ ಅತಿದೊಡ್ಡ ಸಹಕಾರ ಬ್ಯಾಂಕ್ ಎಂಬ ಖ್ಯಾತಿ ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳಕರ್, ಅಂದು ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಚುನಾವಣಾ ಅಖಾಡಕ್ಕೆ ಡಿ.ಕೆ ಶಿವಕುಮಾರ್ ಎಂಟ್ರಿಕೊಟ್ಟ ಪರಿಣಾಮ ಲಕ್ಷ್ಮಿ ಹೆಬ್ಬಾಳಕರ್ ಕೈಮೇಲಾಗಿತ್ತು. ಹೀಗಾಗಿ ರಮೇಶ್ ಜಾರಕಿಹೊಳಿ ಸೇಡಿನಿಂದ ಕುದಿಯುತ್ತಿದ್ದರು. ಈ ಅಸಮಾಧಾನವೇ ಕೊನೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಪರೋಕ್ಷೆ ಕಾರಣ ಆಗಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ರಮೇಶ್-ಸವದಿ ದೂರವಾಗಿದ್ದೇಕೆ..?
ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾಗ ಅಥಣಿ ಕ್ಷೇತ್ರದಿಂದ ಮಹೇಶ ಕುಮಠಳ್ಳಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಅಥಣಿ ಚುನಾವಣೆ ವಿಚಾರವಾಗಿ ಹಲವು ವರ್ಷಗಳಿಂದ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ಮುನಿಸಿಕೊಂಡಿದ್ದರು. ಕಳೆದ ವಷರ್ಷ ಬಿಜೆಪಿ ಸರ್ಕಾರ ಬರಲು ಕಾರಣರಾದ ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರಿದ್ದರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ, ಹಳೆ ವೈಷಮ್ಯ ಮರೆತಿರುವ ಸಂದೇಶ ರವಾನಿಸಿದ್ದಾರೆ. ನಾವಿಬ್ಬರೂ ಹಿಂದಿನಿಂದಲೂ ಒಂದೇ ಆಗಿದ್ದೆವು. ಎಂದು ಹೇಳಿಕೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಶ್ರಮಿಸಬೇಕು ಎಂದು ಪಕ್ಷದ ವರಿಷ್ಠರು ಜಿಲ್ಲೆಯ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ಆದರೆ, 16 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಮಾತ್ರ ಅವಿರೋಧ ಆಯ್ಕೆ ಆಗುವಂತೆ ನೋಡಿಕೊಳ್ಳುವಲ್ಲಿ ಮುಖಂಡರು ಯಶಸ್ವಿಯಾಗಿದ್ದಾರೆ. ಉಳಿದ ಮೂರು ಸ್ಥಾನಗಳಿಗೆ ನ. 6ರಂದು ಚುನಾವಣೆ ನಡೆಯಲಿದೆ.
ಜಿಲ್ಲೆಯಲ್ಲಿ ಹೊಸ ರಾಜಕೀಯ ಪರ್ವ ಆರಂಭ-ಸವದಿ
ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ಬಳಿಕ ಬೆಳಗಾವಿಯಲ್ಲಿ ಮಾತನಾಡಿರುವ ಡಿಸಿಎಂ ಲಕ್ಷ್ಮಣ ಸವದಿ, ಕಳೆದ ಒಂದು ವಾರದಿಂದ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲು ಕಸರತ್ತು ಮಾಡಿದ್ದೇವೆ. ನಮ್ಮಿಬ್ಬರ ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆ ಒತ್ತು ನೀಡಿದ್ದೇವೆ. ಪಕ್ಷದ ಮುಖಂಡರು ಇದೇ ಸೂಚನೆಯನ್ನು ನೀಡಿದ್ದರು. ಜಾರಕಿಹೊಳಿ, ಸವದಿ ಹಾಗೂ ಕತ್ತಿ ಕುಟುಂಬ ಒಟ್ಟಿಗೆ ಬರಬೇಕು ಎಂಬ ನಿರ್ಧಾರ ಮಾಡಿದ್ದೇವೆ. ಈ ಮೂಲಕ ಜಿಲ್ಲೆಯಲ್ಲಿ ಹೊಸ ರಾಜಕೀಯ ಪರ್ವ ಆರಂಭಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಈ ಚುನಾವಣೆಯಲ್ಲಿ ನಾವು ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಗಲಿದೆ. 16 ನಿರ್ದೇಶಕ ಸ್ಥಾನಗಳ ಪೈಕಿ 13 ಅವಿರೋಧ ಆಯ್ಕೆಯಾಗಿದೆ. ಮೂರು ಕ್ಷೇತ್ರದಲ್ಲಿ ಹೆಸರಿಗೆ ಮಾತ್ರ ಚುನಾವಣೆ ಆಗಲಿದೆ. ರಾಮದುರ್ಗ, ಖಾನಾಪುರ ಹಾಗೂ ಕುರಿ ಉಣ್ಣಿ ಸಹಕಾರ ಸಂಘದ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಸೇರಿ ಪ್ರಯತ್ನ ನಡೆಸಿದ್ದೇವೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಗ್ಗೆ ಒಟ್ಟಿಗೆ ಸೇರಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆಯೆ ಇಲ್ಲ ಎಂದು ತಿಳಿಸಿದರು.
ಅಂಜಲಿ ನಿಂಬಾಳ್ಕರ್ ನಾಮಪತ್ರ ಹಿಂಪಡೆಯಬೇಕಿತ್ತು-ರಮೇಶ್
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಸಹಕಾರ ಕ್ಷೇತ್ರದ್ದಾಗಿದ್ದು ಇಲ್ಲಿ ಪಕ್ಷ ಬರುವುದಿಲ್ಲ. 16 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳ ಅವಿರೋಧ ಆಯ್ಕೆ ಆಗಿದೆ. ಉಳಿದ ಮೂರು ಕ್ಷೇತ್ರಗಳ ಅವಿರೋಧ ಆಯ್ಕೆಗೆ ಪ್ರಯತ್ನ ಮಾಡಿದ್ದೇವೆ. ಆದರೆ ಸಮಯದ ಅಭಾವದ ಕಾರಣ ಆ ಮೂರು ಕ್ಷೇತ್ರಗಳ ಅವಿರೋಧ ಆಯ್ಕೆ ಸಾಧ್ಯವಾಗಲಿಲ್ಲ. ನವೆಂಬರ್ 6 ಕ್ಕೆ ಮೂರು ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಅಂಜಲಿ ನಿಂಬಾಳ್ಕರ್ ಶಾಸಕಿ ಆಗಿ ನಾಮಪತ್ರ ಹಿಂಪಡೆಯಬೇಕಿತ್ತು. ಚುನಾವಣೆ ನಡೆಯಲಿ, ನಮ್ಮ ಅಭ್ಯರ್ಥಿ ಅರವಿಂದ ಪಾಟೀಲ್,
ಗಜಾನನ ಕೊಳ್ಳಿ, ರಾಮದುರ್ಗದ ಶ್ರೀಕಾಂತ್ ಧವಳ ಗೆಲುವಿಗೆ ಶ್ರಮಿಸುತ್ತೇವೆ ಎನ್ನುವ ಮೂಲಕ ಶಾಸಕಿ ಅಂಜಲಿ ನಿಂಬಾಳ್ಕರ್ ವರ್ತನೆಗೆ ಸಚಿವ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel