ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು
ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರ ಮತ್ತು ಸುಸ್ತಿನಿಂದ ಬಳಲುತ್ತಿರುವ ಡಾ. ಸಿಂಗ್ ಅವರನ್ನು ಬುಧವಾರ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ 89 ವರ್ಷದ ಮನಮೋಹನ್ ಸಿಂಗ್ ಅವರು ಇತ್ತಿಚೆಗೆ ಯಾವುದೇ ರಾಜಕೀಯ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು.
ಕಳೆದ ಎರಡು ದಿನಗಳಿಂದ ಮನ ಮೋಹನ್ ಸಿಂಗ್ ಅವರಿಗೆ ಜ್ವರ ಕಾಣಿಸಿಕೊಂಡು ಅತಿಯಾದ ಸುಸ್ತು ಉಂಟಾದ ಕಾರಣ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯದ ವರದಿಯ ಪ್ರಕಾರ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇತ್ತ ಡಾ. ಮನಮೋಹನ್ ಸಿಂಗ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮನಮೋಹನ್ ಸಿಂಗ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.









