ಭಾರತ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ ಜವಾನ ಕೆಲಸಕ್ಕಾಗಿ ಅಲೆದಾಟ..!
ದಿನೇಶ್ ಸೇನ್…. ಭಾರತ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ. 2015 ರಿಂದ 2019ರವರೆಗೆ ಭಾರತ ವಿಕಲ ಚೇತನ ಕ್ರಿಕೆಟ್ ತಂಡಕ್ಕೆ ನಾಯಕತ್ವ ವಹಿಸಿದ್ದರು. ಆದ್ರೆ ಈಗ ಪರಿಸ್ಥಿತಿಯನ್ನು ನೋಡಿದಾಗ ಅಯ್ಯೋ ಅನ್ನಿಸುತ್ತಿದೆ. ಕ್ರಿಕೆಟ್ ಆಡುವಾಗ ಎಲ್ಲ ನೋವುಗಳನ್ನು ಮರೆತಿರುವ ದಿನೇಶ್ ಅವರು ಈಗ ತನ್ನ ಬದುಕಿನ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.
ಕೋವಿಡ್-19 ಸಂಕಷ್ಟ ಒಂದು ಕಡೆಯಾದ್ರೆ ಮತ್ತೊಂದೆಡೆ ದಿನ ನಿತ್ಯದ ಊಟಕ್ಕಾಗಿ ಬೇರೆಯವರನ್ನು ಬೇಡುವ ಪರಿಸ್ಥಿತಿ ಬಂದಿದೆ. ಭಾರತ ವಿಕಲ ಚೇತನ ತಂಡದ ನಾಯಕನಾಗಿದ್ದರೂ ಬದುಕು ನಡೆಸಲು ಉದ್ಯೋಗ ಸಿಕ್ಕಿಲ್ಲ. ಬಡತನದ ಬೇಗೆಯಲ್ಲೇ ಅರಳಿದ್ದ ಈ ವಿಕಲಚೇತನ ಕ್ರಿಕೆಟಿಗ ಉದ್ಯೋಗಕ್ಕಾಗಿ ಅಲೆದಾಡಿರುವುದು ಅಷ್ಟಿಷ್ಟಲ್ಲ. ಇತ್ತೀಚೆಗೆ ದೆಹಲಿಯ ಜಿಲ್ಲಾ ನ್ಯಾಯಾಲದ ಜವಾನ ಹುದ್ದೆಗೆ ಸಂದರ್ಶನ ನೀಡಿದ್ದರು. ಆದ್ರೆ ಸರ್ಕಾರಿ ಕೆಲಸ ಸಿಗಲಿಲ್ಲ.
ರಾಷ್ಟ್ರೀಯ ಉದ್ದೀಪನ ದ್ರವ್ಯ ತಡೆ ಘಟಕದ (ನಾಡಾ) ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಒಂದು ವೇಳೆ ನಾಡಾದಲ್ಲಿ ಕೆಲಸ ಸಿಕ್ಕರೆ ಕ್ರಿಕೆಟ್ ಮತ್ತು ಕ್ರೀಡಾ ಕ್ಷೇತ್ರದ ನಂಟನ್ನು ಮುಂದುವರಿಸಬಹುದು ಎಂಬ ಆಸೆಯಲ್ಲಿದ್ದೇನೆ. ಅಲ್ಲದೆ ಯುವ ಕ್ರಿಕೆಟಿಗರಿಗೆ ತರಬೇತಿಯನ್ನು ನೀಡಬಹುದು. ಹಾಗೇ ನನ್ನ ಕುಟುಂಬವನ್ನು ಸಾಕಬಹುದು ಎಂದು ದಿನೇಶ್ ಸೇನ್ ಹೇಳ್ತಾರೆ.
ಇದು ನನಗೆ ಕೊನೆಯ ಅವಕಾಶ. ಸರ್ಕಾರಿ ಕೆಲಸ ಸಿಗಬೇಕಾದ್ರೆ 25 ವರ್ಷ ವಯೋಮಿತಿ ದಾಟಿರಬಾರದು. ಆದ್ರೆ ವಿಕಲ ಚೇತನರ ಕೋಟಾದಲ್ಲಿ 35 ವಯೋಮಿತಿ ತನಕ ಅವಕಾಶವಿದೆ. ಈಗ ನನಗೆ 35 ವರ್ಷ. ನಾನು ಹೆಚ್ಚು ಓದಿಲ್ಲ. ಪಿಯುಸಿ ನಂತರ ಬರೀ ಕ್ರಿಕೆಟ್ ಆಡ್ತಾ ಇದ್ದೆ. ಈಗ ಮೊದಲ ವರ್ಷದ ಪದವಿಗೆ ನೊಂದಣಿ ಮಾಡಿಕೊಂಡಿದ್ದೇನೆ. ಈ ಕೆಲಸ ಸಿಕ್ಕರೆ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂಬುದು ದಿನೇಶ್ ಸೇನ್ ಅವರ ಅಭಿಮತವಾಗಿದೆ.
ದಿನೇಶ್ ಸೇನ್ ಅವರು ಪೋಲಿಯೋ ಪೀಡಿತರಾಗಿದ್ದರು. ಹಾಗಂತ ಸುಮ್ಮನೆ ಕೂರಲಿಲ್ಲ. ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿದ್ದ ದಿನೇಶ್, ಕ್ರಿಕೆಟ್ ತನ್ನ ಬದುಕು ಎಂದು ನಂಬಿಕೊಂಡಿದ್ದರು. ತನ್ನ ಅದ್ಭುತ ಪ್ರತಿಭೆಯ ಮೂಲಕ ಭಾರತ ವಿಕಲ ಚೇತನರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಸಾರಥಿ ಕೂಡ ಆಗಿದ್ದರು. 2015ರಲ್ಲಿ ಬಾಂಗ್ಲಾದಲ್ಲಿ ನಡೆದಿದ್ದ ಐದು ದೇಶಗಳ ಟೂರ್ನಿಯಲ್ಲಿ ಆಡಿದ್ದೆ. ನಾನು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್‍ಗಳನ್ನು ಪಡೆದುಕೊಂಡಿದ್ದೆ. ಅದರಲ್ಲಿ ಎರಡು ವಿಕೆಟ್ ಗಳು ಪಾಕ್ ವಿರುದ್ಧ. ಆದ್ರೆ ಭಾರತ ತಂಡದಲ್ಲಿ ಆಡಿದ್ರೂ ಆರ್ಥಿಕವಾಗಿ ಯಾವುದೇ ಸಹಾಯವಾಗಿಲ್ಲ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ ದಿನೇಶ್ ಸೇನ್.
ದಿನೇಶ್ ಸೇನ್ ಅವರನ್ನು ಇಷ್ಟು ದಿನ ಅವರ ಅಣ್ಣಂದಿರು ನೋಡಿಕೊಳ್ಳುತ್ತಿದ್ದರು. ಅವರಿಗೆ ಒಂದೂವರೆ ವರ್ಷ ಮಗು ಮತ್ತು ಪತ್ನಿ ಇದ್ದಾರೆ.