ಬೆಂಗಳೂರು: ಕನ್ನಡ ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ ಗೆ ಕೊರೊನಾ ಸೋಂಕಿರುವುದು ಇತ್ತೀಚೆಗೆ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಈ ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿದ್ದ ನಾಲ್ವರು ಸಚಿವರನ್ನು 14 ದಿನಗಳ ಕಾಲ ಪ್ರತ್ಯೇಕ ವಾಸದಲ್ಲಿರುವಂತೆ ಶಿಫಾರಸು ಮಾಡಲಾಗಿದೆ.
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಪ್ರತ್ಯೇಕ ವಾಸದಲ್ಲಿರಲು ಸೂಚಿಸಲಾಗಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
I have taken a swab test and it has come negative. I am under self quarantine and I am healthy.#Covid19
ನಾನು ಕೋವಿಡ್-19 ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು ಅದು ನೆಗೆಟಿವ್ ಬಂದಿರುತ್ತದೆ, ನಾನು ಆರೋಗ್ಯದಿಂದಿದ್ದು, ಸ್ವತಃ ಕ್ವಾರೆಂಟೈನ್ ಗೆ ಒಳಗಾಗಿದ್ದೇನೆ.
— Basavaraj S Bommai (@BSBommai) April 29, 2020
ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ನಲ್ಲಿ.. ನಾನು ಕೊರೊನಾ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದೇನೆ. ನನ್ನ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದು, ಅದು ನೆಗೆಟಿವ್ ಬಂದಿರುತ್ತದೆ. ನಾನು ಆರೋಗ್ಯದಿಂದಿದ್ದು, ಸ್ವತಃ ಕ್ವಾರಂಟೈನ್ ಗೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ.
ಅಶ್ವತ್ಥನಾರಾಯಣ ಅವರು, ‘ಕೋವಿಡ್-19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದೆಂಬ ಮಾಹಿತಿ ಪಡೆದಿದ್ದು, ನಾನು ಹೋಂ ಕ್ವಾರಂಟೈನ್ ಆಗಿರುತ್ತೇನೆ. ನನ್ನ ಟೆಸ್ಟ್ ನೆಗೆಟಿವ್ ಬಂದಿದ್ದು, ಜಾಗರೂಕತೆಗಾಗಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ತಿಳಿಸ ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಕೋವಿಡ್-19 ಪಾಸಿಟಿವ್ ಬಂದಿರುವ ಟಿವಿ ಪತ್ರಕರ್ತರ ಜೊತೆ ನಾನು ಕೂಡ ಸಂಪರ್ಕಕ್ಕೆ ಬಂದಿರುವ ವಿಷಯ ಗೊತ್ತಾದ ಹಿನ್ನಲೆಯಲ್ಲಿ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೇನೆ, ನೆಗೆಟಿವ್ ಬಂದಿದೆ. ಹಾಗಿದ್ದರೂ, ಮುನ್ನೆಚ್ಚರಿಕೆಯಿಂದ 7 ದಿನ ನನ್ನ ಮನೆಯಲ್ಲೆ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದೇನೆ, ಅಲ್ಲಿಂದಲೇ ಕರ್ತವ್ಯವನ್ನು ನಿರ್ವಹಿಸುತ್ತೇನೆ’ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಸಿ.ಟಿ ರವಿ ಟ್ವೀಟ್ ನಲ್ಲಿ.. ‘ಕನ್ನಡ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಕ್ಯಾಮೆರಾಮನ್ ಗೆ ಕೋವಿಡ್-19 ಇರುವುದು ಇತ್ತೀಚೆಗೆ ದೃಢಪಟ್ಟಿದೆ. ನನ್ನ ಸಭೆಗಳ ಸಂದರ್ಭದಲ್ಲಿ ನಾನು ಅವರೊಂದಿಗೆ ನಿಕಟ ಸಂವಹನ ನಡೆಸದ ಹೊರತಾಗಿಯೂ, ಏಪ್ರಿಲ್ 28ರಂದು ಪರೀಕ್ಷೆಗೆ ಒಳಗಾಗಿದ್ದೇನೆ. ಪರೀಕ್ಷೆಯಲ್ಲಿ ಕೊರೊನಾವೈರಸ್ ನೆಗೆಟಿವ್ ಬಂದಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ’ ಎಂದು ತಿಳಿಸಿ, ವರದಿ ಪ್ರತಿಯನ್ನೂ ಹಂಚಿಕೊಂಡಿದ್ದಾರೆ.