ಬೆಳಗಾವಿ: ಎಸ್ಪಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ (Rajasthan) ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆರೋಪಿ ಜನರಿಗೆ ಹಣಕ್ಕೆ ಬೇಡಿಕೆ ಇಟ್ಟು ವಂಚಿಸುತ್ತಿದ್ದ. ಅಲ್ಲದೇ, ಗದಗ (Gadag) ಮತ್ತು ಮಂಡ್ಯ (Mandya) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲೂ ನಕಲಿ ಖಾತೆ ರಚಿಸಿ ವಂಚಿಸಿದ್ದ ಎನ್ನಲಾಗಿದೆ.
ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ವಂಚಿಸುತ್ತಿರುವ ಮಾಹಿತಿ ತಿಳಿದ ಬೆನ್ನಲ್ಲೇ ಆತನ ವಿರುದ್ಧ ಬೆಳಗಾವಿ ಎಸ್ಪಿ ಪ್ರಕರಣ ದಾಖಲಿಸಿದ್ದರು. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಯಾವ ಪೊಲೀಸ್ ಅಧಿಕಾರಿಗಳೂ ಹಣ ಕೇಳುವುದಿಲ್ಲ. ಜಾಲತಾಣ ನಂಬಿ, ಯಾರೂ ಹಣ ಕೊಡಬಾರದು ಎಂದು ಮನವಿ ಮಾಡಿದ್ದಾರೆ.








