ಬೆಂಗಳೂರು: ಇತ್ತೀಚೆಗೆ ಆನ್ ಲೈನ್ ವಂಚನೆ ಹೆಚ್ಚಾಗುತ್ತಿದ್ದು, ಇಲ್ಲೊಂದು ಪ್ರಕರಣದಲ್ಲಿ ಕೂಡ ಇಂತಹುದೇ ಘಟನೆ ನಡೆದಿದೆ. ಆನ್ ಲೈನ್ ನಲ್ಲಿ ಪಾರ್ಟ್ ಟೈಂ ಕೆಲಸ ಹುಡುಕುವವರನ್ನೇ ಗುರಿಯಾಗಿಸಿ ಮೋಸ ಮಾಡಿರುವ ಘಟನೆಯೊಂದು ನಡೆದಿದ್ದು, ಪೊಲೀಸರು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ನಗರದ (Bengaluru) ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ಯೂನಸ್, ಸಯದ್ ಅರ್ಬಾಜ್, ಮೊಹಮ್ಮದ್ ಖಲಿಮುಲ್ಲಾ, ಇಬ್ರಾಹಿಮ್ ಕರ್ನೂಲ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಟಾಸ್ಕ್ ಕೊಟ್ಟು ಜನರನ್ನು ವಂಚಿಸುತ್ತಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.
ಪಾರ್ಟ್ ಟೈಂ ಜಾಬ್ ಲಿಂಕ್ ಓಪನ್ ಮಾಡಿದ ಕೂಡಲೇ ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಮೂಲಕ ಮೆಸೇಜ್ ಬರುತ್ತಿತ್ತು. ನಂತರ ಟಾಸ್ಕ್ ಕೊಡಲು ಆರಂಭಿಸಿ, ಮೊದಲಿಗೆ ಹೊಟೆಲ್ ರಿವ್ಯೂ ಕೊಡಿ, ಇನ್ಸ್ಟಾಗ್ರಾಂ ವಿಡಿಯೋ ಲೈಕ್ ಮಾಡಿ ಎಂದು ಹೇಳಿದ್ದಾರೆ. ಆನಂತರ ಲೈಕ್ ಮಾಡಿದ ಕೂಡಲೇ 150 -200 ರೂ. ಅಕೌಂಟ್ ಗೆ ಹಾಕಿ ಆಮಿಷ ಒಡ್ಡುವ ಕಾರ್ಯ ಮಾಡಿದ್ದಾರೆ. ಆನಂತರ ಮೋಸ ಮಾಡಲು ಆರಂಭಿಸಿದ್ದಾರೆ. ಬಂಧಿತ ಆರೋಪಿಗಳು ಬರೋಬ್ಬರಿ 305 ಜನರಿಗೆ ವಂಚಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳಿಂದ 4 ಮೊಬೈಲ್, 2 ಪಾಸ್ ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಬಯೋಮೆಟ್ರಿಕ್ ಸಾಧನ, ಕಂಪನಿ ಸೀಲ್ ವಶಕ್ಕೆ ಪಡೆಯಲಾಗಿದೆ.