ಧಾರವಾಡ : ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ಸಪ್ತಾಪೂರದ ಉದಯ ಹಾಸ್ಟೆಲ್ ರಸ್ತೆಯ ಕೊನೆಯ ಹಂತದಲ್ಲಿ ಇರುವ ಆಯುರ್ಧಾಮ ಆಸ್ಪತ್ರೆಯಲ್ಲಿ ಗುರುವಾರ (ನವ್ಹೆಂ.14) ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಧುಮೇಹದ ಉಚಿತ ತಪಾಸಣೆ ನಡೆಯಲಿದೆ. ಹಿರಿಯ ಆಯುರ್ವೇದ ತಜ್ಞ ಡಾ.ಮಹಾಂತಸ್ವಾಮಿ ಹಿರೇಮಠ ಅವರು ಎಲ್ಲಾ ವಯಸ್ಸಿನವರಿಗೂ ಮಧುಮೇಹದ ಉಚಿತ ತಪಾಸಣೆ ನಡೆಸಿ ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದದ ಸಲಹೆಗಳನ್ನು ನೀಡಲಿದ್ದಾರೆ.
ವಿಶ್ವ ಮಧುಮೇಹ ದಿನದ ಸಂದೇಶ ನೀಡಿರುವ ಡಾ.ಮಹಾಂತಸ್ವಾಮಿ ಹಿರೇಮಠ ಅವರು, ಪ್ರಸ್ತುತ ಮಧುಮೇಹ ಹೊಂದಿರುವ ಲಕ್ಷಾಂತರ ಜನರು ತಮ್ಮ ಬದುಕಿನ ಕೆಲಸಗಳಲ್ಲಿ ವಿಭಿನ್ನ ರೀತಿಯಲ್ಲಿ ದೈನಂದಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಮಧುಮೇಹದ ಕಾರಣದಿಂದಾಗಿ ಆತಂಕ, ಖಿನ್ನತೆ ಅಥವಾ ಇತರೇ ಮಾನಸಿಕ ಆರೋಗ್ಯದಲ್ಲಿಯೂ ಏರುಪೇರು ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಮಧುಮೇಹಿಗಳ ಯೋಗಕ್ಷೇಮಕ್ಕೆ ಎಲ್ಲಾ ನೆಲೆಗಳಲ್ಲಿ ನಾಲ್ಕೂ ನಿಟ್ಟಿನಿಂದ ಪ್ರಪಂಚದಾದ್ಯಂತ ಸುಲಭ ಚಿಕಿತ್ಸೆಗೆ ವ್ಯಾಪಕ ವಾತಾವರಣ ನಿರ್ಮಿಸುವುದು ವಿಶ್ವ ಮಧುಮೇಹ ದಿನದ ಪ್ರಮುಖ ಆಶಯವಾಗಿದೆ. ಮಧುಮೇಹದ ಆರೈಕೆಯು ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆಯ ಮೇಲೆ ನಿಯಂತ್ರಣ ಮಾಡುವುದನ್ನು ಕೇಂದ್ರೀಕರಿಸುತ್ತದೆ. ಇದು ಅನೇಕರನ್ನು ಭಯಗ್ರಸ್ತರನ್ನಾಗಿಸಿದೆ. ಜೀವನ ವಿಧಾನದಲ್ಲಿ ಆಯುರ್ವೇದ ಒದಗಿಸುವ ಹೃದ್ಯವಾದ ಬಾಹ್ಯ ಬಾಧಕಗಳಿಲ್ಲದ ಔಷಧಿ ಸೇವನೆಯ ಜೊತೆಗೆ, ನಿತ್ಯದಲ್ಲಿ ನಿಗದಿತ ದೂರದ ನಡಿಗೆ, ಹಿತವಾದ ವ್ಯಾಯಾಮ, ಯೋಗ ಸಾಧನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಅನ್ಯಥಾ ವ್ಯಸನಗಳಿಂದ ಮುಕ್ತವಾಗಿರುವದನ್ನು ರೂಢಿಸಿಕೊಂಡರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ ಎಂದವರು ಹೇಳಿದ್ದಾರೆ.
ವಿಶೇಷವಾಗಿ ಇಂದು ಯುವಕರಲ್ಲಿ ಕಾಣಿಸಿಕೊಳ್ಳುತ್ತಿರುವ ಸಕ್ಕರೆ ಕಾಯಿಲೆಗೆ ಗುರುವಾರ ಉಚಿತ ತಪಾಸಣೆ ಹಾಗೂ ವೈದ್ಯಕೀಯ ಸಲಹೆಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಡಾ. ಮಹಾಂತಸ್ವಾಮಿ ಹಿರೇಮಠ ಅವರನ್ನು ಅವರ ಮೊಬೈಲ್ ಸಂಖ್ಯೆ 9448157681 ಗೆ ಸಂಪರ್ಕಿಸುವಂತೆ ಆಯುರ್ಧಾಮದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.