ರಾಜ್ಯದಲ್ಲಿ ಹಾಲಿನ ದರ ಮತ್ತು ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ, ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದು, ಅವರು ಮೊದಲು ‘ಐ ಲವ್ ಯು ನಂದಿನಿ’ ಅಂತಾ ಜಾಹೀರಾತು ಕೊಟ್ಟರು, ಈಗ ‘ಐ ಹೇಟ್ ಯು ನಂದಿನಿ’ ಅಂತಾ ಜಾಹೀರಾತು ಕೊಡೋ ಸಮಯ ಬಂದಿದೆ ಎಂದು ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಸಿದ್ದರಾಮಯ್ಯರ ಬಜೆಟ್ ಬಗ್ಗೆ ಹರಿಹಾಯ್ದಿದ್ದಾರೆ.
ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್..
ಹಾಲು, ವಿದ್ಯುತ್, ನೀರಿನ ದರ ಏರಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಹಿಂದಿನ ಬಜೆಟ್‌ನಲ್ಲಿ ಸಿದ್ದರಾಮಯ್ಯ ‘ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿನ್ ಹೆಂಡ್ತಿಗೂ ಫ್ರೀ, ನನ್ ಹೆಂಡ್ತಿಗೂ ಫ್ರೀ’ ಅಂತಾ ಹೇಳುತ್ತಿದ್ದರು. ಆದರೆ ಈಗ ಅದೇ ಸಿದ್ದರಾಮಯ್ಯ ‘ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್’ ಅನ್ನಬೇಕು” ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮೋಸ ಮಾಡುವುದರಲ್ಲಿ ನಂಬರ್ 1
ಸಿದ್ದರಾಮಯ್ಯನವರ ಬಜೆಟ್ ಅನ್ನು ‘ಮೋಸದ ಬಜೆಟ್’ ಎಂದು ಕರೆಯುತ್ತಾ, “ಈ ಬಜೆಟ್ ಸುಳ್ಳಿನಿಂದ ಕೂಡಿದೆ. ನಾನು ಹಿಂದೆಯೇ ಹೇಳಿದ್ದೆ, ಬಜೆಟ್‌ನಲ್ಲಿ ತೆರಿಗೆಗಳ ಹೊರೆ ಇರುತ್ತದೆ. ಈಗ ಜನರ ಮೇಲಿನ ಆ ಹೊರೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಿದ್ದರಾಮಯ್ಯ ಮೋಸ ಮಾಡುವುದರಲ್ಲಿ ದೇಶದಲ್ಲಿ ನಂಬರ್ 1 ಎಂದು ಕಿಡಿಕಾರಿದರು.
ಬಜೆಟ್ ಆಗಿ ಹತ್ತು ದಿನವೂ ಆಗಿಲ್ಲ, ಆದರೆ ಈಗಾಗಲೇ ದರ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ ಹಾಲಿನ ದರ 9 ರೂ. ಹೆಚ್ಚಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮನೆಹಾಳು ಕೆಲಸ ಎಂದು ಅವರು ವಾಗ್ದಾಳಿ ನಡೆಸಿದರು.
ಯುಗಾದಿಗೆ ಜನರಿಗೆ ಶಾಕ್ – ‘ದುಬಾರಿ ಬೆಂಗಳೂರು’ ಯುಗ!
ಯುಗಾದಿ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಶಾಕ್ ನೀಡಿದೆ. ಇನ್ನು ಡಿಕೆಶಿ (D.K. Shivakumar) ನೀರಿನ ದರ ಹೆಚ್ಚಿಸಲು ಹೊರಟಿದ್ದಾರೆ. ಈಗ ನೀರಿನ ದರ ಏರಿಕೆಯ ‘ದೆವ್ವ’ ಬಾಗಿಲಿಗೆ ಬಂದು ನಿಂತಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೇ ದೇವರು ಎಂದರು, ಈಗ ಎಲ್ಲರಿಗೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಮುಂದೆ ‘ಗ್ರೀನ್ ಟ್ಯಾಕ್ಸ್’ ಕೂಡ ಬರುವ ಸಾಧ್ಯತೆ ಇದೆ. ಎಂದು ಎಚ್ಚರಿಸಿದರು.
“ಹಿಂದಿನ ‘ಬ್ರಾಂಡ್ ಬೆಂಗಳೂರು’ ಈಗ ‘ದುಬಾರಿ ಬೆಂಗಳೂರು’ ಆಗಿದೆ..ಜನರಿಗೆ ಮುಂದಿನ ದಿನಗಳಲ್ಲಿ ತ್ರಿಬಲ್ ಧಮಾಕಾ ಬೆಲೆ ಏರಿಕೆ ಕಾದಿದೆ ಎಂದು ಅಶೋಕ್ ಅವರು ಕಿಡಿಕಾರಿದರು.