ಬೆಂಗಳೂರು: ಮುಡಾ ಹಗರಣ (MUDA Scam)ಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾನೂನು ಸಮರ (Legal Battle) ಆರಂಭವಾಗಲಿದೆ.
ಇಂದು ಹೈಕೋರ್ಟ್ ನಲ್ಲಿ (High Court) ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಕಪಿಲ್ ಸಿಬಲ್ ಅವರು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಲಿದ್ದಾರೆ. ಅಲ್ಲದೇ, ಈ ವೇಳೆ ರಾಜ್ಯಪಾಲರ ನಡೆಯನ್ನೇ ಪ್ರಶ್ನಿಸಲಾಗುತ್ತದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ನಡೆ ರಾಜಕೀಯ ಪ್ರೇರಿತವಾಗಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ನಡೆದಿಲ್ಲ. ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಡೆದಿಲ್ಲ. ಮುಡಾ (MUDA) ನಿಯಮದ ಅನ್ವಯವೇ ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ ನನ್ನ ಮತ್ತು ನನ್ನ ಕುಟುಂಬ ಯಾವುದೇ ನಿಯಮ ಉಲ್ಲಂಘಿಸಿಲ್ಲ. ಇದು ರಾಜಕೀಯ ಪ್ರೇರಿತ ಅಷ್ಟೇ. ಆ ಆಸ್ತಿ ನನ್ನ ಪತ್ನಿಗೆ ಅವರ ಸಹೋದರರು ನೀಡಿರುವ ಗಿಫ್ಟ್. ನಮ್ಮ ಆಸ್ತಿಯನ್ನು ಮುಡಾ ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿತ್ತು. ಹೀಗಾಗಿ ಪರ್ಯಾಯವಾಗಿ ಈ ಸೈಟ್ ನೀಡಿದೆ. ಇದೆಲ್ಲ ಬಿಜೆಪಿ ಅವಧಿಯಲ್ಲಿ ನಡೆದಿರುವ ಕಾರ್ಯ. ನನ್ನ ಪಾತ್ರ ಯಾವುದು ಇಲ್ಲ. ಅಲ್ಲದೇ, ರಾಜ್ಯಪಾಲರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಸಿಎಂ ಹಲವು ಅಂಶಗಳನ್ನು ಮುಂದಿಟ್ಟು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದು ಮಾಡಬೇಕು ಎಂದು ವಾದಿಸಲಿದ್ದಾರೆ.
ಯಾವುದೇ ಸೂಕ್ತ ಆಧಾರವಿಲ್ಲದೇ ತನಿಖೆಗೆ ಒಪ್ಪಿಗೆ ನೀಡಲಾಗಿದೆ. ಖಾಸಗಿ ದೂರಿನ ಮೇಲೆ ತನಿಖೆಗೆ ನೀಡಿರುವುದು ಕಾನೂನು ಬಾಹಿರ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ. ನಾನು ಯಾರ ಮೇಲೆಯೂ ಪ್ರಭಾವ ಬೀರಿಲ್ಲ ಎಂದು ವಿಷಯ ಪ್ರಸ್ತಾಪಿಸಲಿದ್ದಾರೆ.








