ಭುವನೇಶ್ವರ: ಭಾವಿ ಪತಿಯ ಎದುರೇ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಅಮಾನವೀಯ ಘಟನೆ ಒಡಿಶಾದ (Odisha) ನಯಾಗಢದಲ್ಲಿ ನಡೆದಿದೆ. ಸಂತ್ರಸ್ತೆಯು ಫತೇಗಢ ಪೊಲೀಸ್ (Police) ಠಾಣೆಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಗೆ ಮದುವೆ ನಿಶ್ಚಯವಾಗಿತ್ತು. ಆಕೆ ತನ್ನ ಭಾವಿ ಪತಿ ಜೊತೆಗೆ ಫತೇಗಢ್ ರಾಮ ಮಂದಿರಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದರು. ಈ ವೇಳೆ ಇಬ್ಬರನ್ನು ಮೂವರು ಅಪರಿಚಿತರು ಅಡ್ಡಗಟ್ಟಿ ಬಲವಂತವಾಗಿ ಕಾಡಿಗೆ ಕರೆದೊಯ್ದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರ ಎಸಗುವುದನ್ನು ವಿಡಿಯೋ ಕೂಡ ಮಾಡಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.








