ನಮ್ಮ ದೇಶವನ್ನು ಸುರಕ್ಷಿತವಾಗಿರಿಸುವುದರ ಹಿಂದೆ ಸೇನೆಯ ಪಾತ್ರ ಬಹುದೊಡ್ಡದು. ಭೂಸೇನೆ, ವಾಯುಸೇನೆ, ನೌಕಾಸೇನೆ ದೇಶದ ರಕ್ಷಣೆಗೆ ಸದಾ ಸಿದ್ಧ. ಇವುಗಳ ಹೊರತಾಗಿಯೂ ಕೆಲವು ವಿಶೇಷ ರಕ್ಷಣಾಪಡೆಗಳು ನಮ್ಮ ದೇಶದಲ್ಲಿವೆ.
ಇವು ಶತ್ರುಗಳನ್ನು ಮಟ್ಟಹಾಕಿ ದೇಶದ ಸುರಕ್ಷತೆಗೆ ಎಂಥ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುತ್ತವೆ. ಈ ವಿಶೇಷ ಪಡೆಗಳಲ್ಲಿ ಭಾರತೀಯ ವಾಯುಸೇನೆಯ ಗರುಡ ಕಮಾಂಡೋ ಸಹ ಒಂದು.
2004 ರಲ್ಲಿ ವಾಯುಸೇನೆಯಿಂದ ಸ್ಥಾಪನೆ -ವಾಯುದಾಳಿಗಳ ಮೂಲಕ ಶತ್ರುಗಳನ್ನು ಬಗ್ಗುಬಡಿಯುವುದರಲ್ಲಿ ಪರಿಣಿತರು ಗರುಡ ಫೋರ್ಸ್ ನವರೂ ವಾಯು ಯುದ್ಧದಲ್ಲಿ ತುಂಬಾ ಪರಿಣಿತಿಯನ್ನು ಹೊಂದಿರುತ್ತಾರೆ.
ಡಿಫೆನ್ಸ್ ಬೈ ಅಫೆನ್ಸ್ ಎನ್ನುವ ಧ್ಯೇಯವಾಕ್ಯದಡಿ ಈ ಕಮಾಂಡೋ ಕಾರ್ಯ ನಿರ್ವಹಿಸುತ್ತದೆ. ಇದು ಭಾರತದ ಅತಿ ಕಿರಿಯ ರಕ್ಷಣಾ ಪಡೆ. ಗರುಡ ಕಮಾಂಡೋ ಆಗಲು ಮೊದಲು ಭಾರತೀಯ ವಾಯುಸೇನೆಯನ್ನು ಸೇರಬೇಕು. ಬಳಿಕ ಅಲ್ಲಿದ್ದುಕೊಂಡು ಗರುಡ ಕಮಾಂಡೋ ಆಗಲು ಅಪ್ಲಿಕೇಷನ್ ಸಲ್ಲಿಸಬೇಕು. ವಾಯುಸೇನೆಯಲ್ಲಿ ಯಾವುದೇ ರ್ಯಾಂಕ್‌ನಲ್ಲಿದ್ದರೂ ಅಪ್ಲಿಕೇಷನ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಪಿಯುಸಿಯಲ್ಲಿ ಕನಿಷ್ಟ ೫೦% ಅಂಕ ಗಳಿಸಿದವರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
ದುಂಡಿಗಲ್ ನಲ್ಲಿರುವ ಏರ್ಫೋರ್ಸ್ ಅಕಾಡೆಮಿಯಲ್ಲಿ ಗರುಡ ಕಮಾಂಡೋ ಪಡೆಗೆ ಆಯ್ಕೆ ನಡೆಯುತ್ತದೆ. ಆಯ್ಕೆಯಾದ ಬಳಿಕ ಮೂರು ತಿಂಗಳ ಅತಿ ಕಠಿಣ ತರಬೇತಿ ಇರುತ್ತದೆ. ಈ ಅವಧಿಯಲ್ಲಿ ಕಠಿಣ ತರಬೇತಿಯನ್ನು ಎದುರಿಸಲಾಗದೇ ಸಾಕಷ್ಟು ಸೈನಿಕರು ಹೊರಬೀಳುತ್ತಾರೆ.
ಇದರಲ್ಲಿ ಆಯ್ಕೆಯಾದವರಿಗೆ ಮತ್ತೊಂದು ಹಂತದ ಕಠಿಣ ತರಬೇತಿ ಇರುತ್ತದೆ. ತರಬೇತಿಯ ಸಮಯದಲ್ಲಿ ಹರಿಯುವ ನದಿಗಳಲ್ಲಿ ಬೆಂಕಿಯಲ್ಲಿ ಹಾದು ಹೋಗುವುದು ಮತ್ತು ಯಾರ ಸಹಾಯವನ್ನು ಪಡೆಯದೆ ಬೆಟ್ಟ ಏರುವುದಾಗಲಿ ಭಾರವಾದ ವಸ್ತುಗಳನ್ನು ಹೇರಿಕೊಂಡು ಕಿಲೋ ಮೀಟರ್ ಗಳಷ್ಟು ಓಡುವುದಾಗಲಿ ಕಾಡುಗಳಲ್ಲಿ ವಾಸಿಸುವುದು ಇವೆಲ್ಲವು ಈ ಪಡೆಯ ತರಬೇತಿಯ ವಿಶೇಷ ಭಾಗವಾಗಿರುತ್ತದೆ.
ದೇಶರಕ್ಷಣೆಗೆ ಜೀವ ಪಣಕ್ಕಿಡುವ ಗರುಡ ಕಮಾಂಡೋಗಳಿಗೆ 80ಸಾವಿರದಿಂದ -1.25 ಲಕ್ಷದವರೆಗೆ ವೇತನ ಮತ್ತು ಉಳಿದ ಸೌಲಭ್ಯಗಳು ಲಭ್ಯವಿರುತ್ತವೆ. ದೇಶರಕ್ಷಣೆಗೆ ಪಣ ತೊಟ್ಟು ಕಾರ್ಯ ನಿರ್ವಹಿಸುವ ಈ ವಿಶೇಷ ಭದ್ರತಾ ಪಡೆಗೆ ನಮ್ಮದೊಂದು ಸಲಾಂ.. ಮುಂದಿನಸಂಚಿಕೆಯಲ್ಲಿ ಮತ್ತೊಂದು ವಿಶೇಷ ಭದ್ರತಾ ಪಡೆಯ ಬಗ್ಗೆ ತಿಳಿಯೋಣ.