ಲಾಡ್ರ್ಸ್ ನಲ್ಲಿ ಕಿಟಕಿ ಕ್ಲೀನ್ ಮಾಡುತ್ತಿದ್ದ ಯುವಕ ಮುಂದೆ ನ್ಯೂಜಿಲೆಂಡ್ ತಂಡದ ಕೋಚ್ ಆಗಿದ್ದು ಹೇಗೆ ?
ನ್ಯೂಜಿಲೆಂಡ್ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಮಿಸ್ಟರ್ ಕೂಲ್ ಖ್ಯಾತಿಯ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸಾರ್ಥಕತೆಯ ಭಾವದಲ್ಲಿದ್ದಾರೆ. ನ್ಯೂಜಿಲೆಂಡ್ ಆಟಗಾರರು ಗೆಲುವಿನ ಆಮಲಿನಲ್ಲಿ ತೇಲಾಡುತ್ತಿದ್ದಾರೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಐತಿಹಾಸಿಕ ಜಯ ಸಾಧಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಗೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಗೆಲುವು ಅವಿಸ್ಮರಣೀಯ.
ಅಂದ ಹಾಗೇ ನ್ಯೂಜಿಲೆಂಡ್ ತಂಡದ ಈ ಗೆಲುವಿನ ಹಿಂದಿನ ಮಾಸ್ಟರ್ ಪ್ಲಾನ್ ಕೋಚ್ ಗ್ಯಾರಿ ಸ್ಟೇಡ್. 2019ರ ಏಕದಿನ ವಿಶ್ವ ಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ ಆತ್ಮಬಲವನ್ನು ತುಂಬಿದ್ದು ಹೆಡ್ ಕೋಚ್ ಗ್ಯಾರಿ ಸ್ಟೇಡ್. ಯುವ ಆಟಗಾರರ ಪ್ರತಿಭೆಯನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಕಟ್ಟಿದ್ದ ಹೆಗ್ಗಳಿಕೆ ಕೂಡ ಗ್ಯಾರಿ ಸ್ಟೇಡ್ ಗೆ ಸಲ್ಲುತ್ತದೆ.
ನ್ಯೂಜಿಲೆಂಡ್ ತಂಡದ ಈ ಯಶಸ್ಸಿನ ಹಿಂದೆ ಗ್ಯಾರಿ ಸ್ಟೇಡ್ ಅವರ ಐದು ವರ್ಷಗಳ ಶ್ರಮವಿದೆ. ತರಬೇತುದಾರನಾಗಿ ಆಯ್ಕೆಯಾದ ಎರಡೇ ವರ್ಷದಲ್ಲಿ ನ್ಯೂಜಿಲೆಂಡ್ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೇರಿಸಿದ್ದ ಖ್ಯಾತಿಯೂ ಕೋಚ್ ಗ್ಯಾರಿ ಸ್ಟೇಡ್ ಅವರದ್ದಾಗಿದೆ. ನಂತರದ ಎರಡು ವರ್ಷಗಳಲ್ಲಿ ತಂಡವನ್ನು ಟೆಸ್ಟ್ ಕ್ರಿಕೆಟ್ ನ ನಂಬರ್ ವನ್ ತಂಡವಾಗಿ ರೂಪಿಸಿದ್ದ ಹೆಗ್ಗಳಿಕೆ ಕೂಡ ಇವರ ಹೆಸರಿಗೆ ಸೇರ್ಪಡೆಯಾಗಿದೆ.
ಅಷ್ಟಕ್ಕೂ ಯಾರು ಈ ಗುರು ಗ್ಯಾರಿ ಸ್ಟೇಡ್ ಯಾರು ?
31 ವರ್ಷಗಳ ಹಿಂದೆ ನ್ಯೂಜಿಲೆಂಡ್ ತಂಡದ ಗುರು ಗ್ಯಾರಿ ಸ್ಟೇಡ್ ಏನು ಮಾಡುತ್ತಿದ್ದರು ?
2019ರಲ್ಲಿ ಲಾಡ್ರ್ಸ್ ಮೈದಾನದ ಬಾಲ್ಕನಿಯ ಕಿಟಕಿಗಳನ್ನು ನೋಡಿದಾಗ ಆ ದಿನಗಳು ನೆನಪಾಗಿದ್ದು ಯಾಕೆ ?
ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ಯಾರಿ ಸ್ಟೇಡ್ ನ್ಯೂಜಿಲೆಂಡ್ ತಂಡದ ಕೋಚ್ ಆಗಿದ್ದು ಹೇಗೆ ?
ಕ್ರಿಕೆಟ್ ಆಟಗಾರನ ಬದಲು ತರಬೇತುದಾರನಾಗಿ ಗ್ಯಾರಿ ಸ್ಟೇಡ್ ರೂಪುಗೊಂಡಿದ್ದು ಯಾವಾಗ ?
ತಾನೊಬ್ಬ ನತದೃಷ್ಟ ಅಂತ ಅಂದಕೊಂಡಿದ್ದ ಗ್ಯಾರಿ ಸ್ಟೇಡ್ ಬದುಕಿನ ಗತಿ ಬದಲಾಗಿದ್ದು ಎಲ್ಲಿ ?
ಇದು ಅಚ್ಚರಿಯಾದ್ರೂ ಸತ್ಯ… ಹಾಗಂತ ಇದು ಕನಸು ಅಲ್ಲ.. ಆದ್ರೆ ಹೀಗೆಲ್ಲಾ ಆಗುತ್ತೆ ಅಂತ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಆದ್ರೂ ಇಂತಹ ಅದೃಷ್ಟ ಎಲ್ಲರಿಗೂ ಬರುವುದಿಲ್ಲ.
ಹೌದು, ಇದು ಸರಿ ಸುಮಾರು 31 ವರ್ಷಗಳ ಹಿಂದಿನ ನೈಜ ಘಟನೆ. ಅಂದ ಹಾಗೇ, ಈಗೀನ ಈ ಅದೃಷ್ಟವಂತ ಕೋಚ್ ಗೆ ಆಗ 18ರ ಹರೆಯ.. ಅಂದ್ರೆ ಈಗ ಅವರಿಗೆ 49ರ ಪ್ರಾಯ. ಈ ಹರೆಯದಲ್ಲಿ ಅವರು ಏನು ಮಾಡಬೇಕು ಅದನ್ನು ಮಾಡಿಯಾಗಿದೆ. ಈಗ ತನ್ನ ವೃತ್ತಿ ಬದುಕಿನ ಮಹತ್ವದ ಸಾಧನೆಯ ಗರಿ ಅವರ ಹೆಸರಿಗೆ ಅಂಟಿಕೊಂಡಿದೆ.
ಅಂದ ಹಾಗೇ, ಈ ಗ್ಯಾರಿ ಸ್ಟೇಡ್ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳಬಹುದು. ಯಾಕಂದ್ರೆ ಭಾರತೀಯ ಕ್ರಿಕೆಟ್ ಗೆ ಈ ಹೆಸರು ಅಷ್ಟೊಂದು ಚಿರಪರಿಚಿತವಲ್ಲ. ವಿಶ್ವ ಕ್ರಿಕೆಟ್ ನಲ್ಲೂ ಈ ಹೆಸರು ಅಲ್ಪಸ್ವಲ್ಪ ಕೇಳಿ ಬರುತ್ತಿತ್ತು. ಆದ್ರೆ ನ್ಯೂಜಿಲೆಂಡ್ ಕ್ರಿಕೆಟ್ ವಲಯದಲ್ಲಿ ಗ್ಯಾರಿ ಸ್ಟೇಡ್ ಅನ್ನೋ ಹೆಸರಿಗೆ ತನ್ನದೇ ಆದ ಮಹತ್ವವಿದೆ.
ಹಂತ ಹಂತವಾಗಿ ಬೆಳೆದಿರುವ ಗ್ಯಾರಿ ಸ್ಟೇಡ್ ಅವರನ್ನು ಗುರುವಿನ ಸ್ಥಾನದಲ್ಲಿ ಗೌರವಿಸಲಾಗುತ್ತಿದೆ. ಯಾಕಂದ್ರೆ ಗ್ಯಾರಿ ಸ್ಟೇಡ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮಾತ್ರವಲ್ಲ. ನ್ಯೂಜಿಲೆಂಡ್ ಕ್ರಿಕೆಟ್ ಗೆ ಹೊಸ ಆಯಾಮವನ್ನು ನೀಡಿದ ಗುರು.
2019ರಲ್ಲಿ ನ್ಯೂಜಿಲೆಂಡ್ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಗ್ಯಾರಿ ಸ್ಟೇಡ್ ನ ಚಾಣಕ್ಯ ತಂತ್ರವಿತ್ತು. ಅಷ್ಡೆ ಅಲ್ಲ, ಆಗ ಲಾಡ್ರ್ಸ್ ಮೈದಾನವನ್ನು ಪೆವಿಲಿಯನ್ ನಲ್ಲಿ ಕುಳಿತುಕೊಂಡು ನೋಡಿದಾಗ ಹಳೆಯ ದಿನಗಳು ಕಣ್ಣ ಮುಂದೆ ಹಾದು ಹೋದವು.
ಅಷ್ಟಕ್ಕೂ ಗ್ಯಾರಿ ಸ್ಟೇಡ್ ಲಾಡ್ರ್ಸ್ ಮೈದಾನದಲ್ಲಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ನಿಜ, ಗ್ಯಾರಿ ಸ್ಟೇಡ್ 1990ರಲ್ಲಿ ಲಾಡ್ರ್ಸ್ ಕ್ರೀಡಾಂಗಣದ ಪೆವಿಲಿಯನ್ ನ ಕಿಟಕಿಗಳನ್ನು ಕ್ಲೀನ್ ಮಾಡುತ್ತಿದ್ದರು. ಯಾಕಂದ್ರೆ ಗ್ಯಾರಿ ಸ್ಟೇಡ್ ಎಂಸಿಸಿ ಗ್ರೌಂಡ್ ಸ್ಟಾಫ್ ಆಗಿದ್ದರು. ಆದ್ರೆ 29 ವರ್ಷಗಳ ಬಳಿಕ ಅಂದ್ರೆ 2019ರಲ್ಲಿ ಅದೇ ಗ್ಯಾರಿ ಸ್ಠೇಡ್ ಅವರು ಅದೇ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ಆರಾಮವಾಗಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಿದ್ದರು. ಅದೂ ಒಂದು ತಂಡದ ಗೆಲುವಿಗಾಗಿ ರಣ ತಂತ್ರ ರೂಪಿಸುವ ತರಬೇತುದಾರನಾಗಿ. ಎಂತಹ ಅಚ್ಚರಿ ಅಲ್ವಾ
ಅಂದ ಹಾಗೇ, ಗ್ಯಾರಿ ಸ್ಟೇಡ್ ಅವರು ನ್ಯೂಜಿಲೆಂಡ್ ಪರ ಆಡಿದ್ದು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ. ಅದು ಕೂಡ 9 ತಿಂಗಳು ಮಾತ್ರ. 34ರ ಸರಾಸರಿಯಲ್ಲಿ 278 ರನ್ ಗಳಿಸಿದ್ದಾರೆ. 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಗ್ಯಾರಿ ಸ್ಟೇಡ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದ್ರೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಳಪೆ ಆಟವಾಡಿದ್ದ ಕಾರಣ ತಂಡದಿಂದಲೇ ಹೊರಬಿದ್ರು.
ಆರಂಭಿಕ ಆಟನಾರನಾಗಿರುವ ಗ್ಯಾರಿ ಸ್ಟೇಡ್ ತನ್ನ ಕೊನೆಯ ಟೆಸ್ಟ್ ಪಂದ್ಯದಲ್ಲಿ 17 ರನ್ ಗಳಿಸಿದ್ದರು. ಬಳಿಕ ದೇಸಿ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿದ್ರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಆದ್ರೆ ನಂತರ ಗ್ಯಾರಿ ಸ್ಟೇಡ್ ಅವರು ನ್ಯೂಜಿಲೆಂಡ್ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. 27ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಅಷ್ಟೇ ವೇಗದಲ್ಲಿ ಮಾಯವಾಗಿದ್ದ ಗ್ಯಾರಿ ಸ್ಟೇಡ್ ಅವರು ಕೋಚಿಂಗ್ ನತ್ತ ಮುಖ ಮಾಡಿದ್ದರು.
ದೇಸಿ ತಂಡಗಳಿಗೆ ತರಬೇತುದಾರನಾಗಿದ್ದ ಗ್ಯಾರಿ ಸ್ಟೇಡ್ 2008ರಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡದ ತರಬೇತುದಾರನಾಗಿ ನೇಮಕಗೊಂಡ್ರು. ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಆಗಿ ಯಶ ಸಾಧಿಸಿದ್ದ ಗ್ಯಾರಿ 2018ರಲ್ಲಿ ಪುರುಷರ ತಂಡದ ಕೋಚ್ ಆಗಿ ನೇಮಕಗೊಂಡಿದ್ರು.
ಒಟ್ಟಿನಲ್ಲಿ ಒಬ್ಬ ಆಟಗಾರನಾಗಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇನ್ನು ವಿಶ್ವಕಪ್ ತಂಡದಲ್ಲಿ ಭಾಗಿಯಾಗೋದು ಮರೀಚಿಕೆಯಾಗಿತ್ತು. ಆದ್ರೆ ಈಗ ನ್ಯೂಜಿಲೆಂಡ್ ತಂಡದ ಮಾಸ್ಟರ್ ಮೈಂಡ್ ಆಗಿದ್ದಾರೆ ಗ್ಯಾರಿ ಸ್ಟೇಡ್. ಅಷ್ಟೇ ಅಲ್ಲ, ಲಾಡ್ರ್ಸ್ ಮೈದಾನದಲ್ಲಿ ಕಿಟಕಿಗಳನ್ನು ಕ್ಲೀನ್ ಮಾಡುತ್ತಿದ್ದ ಗ್ರ್ಯಾಂಡ್ ಸ್ಟಾಫ್ ಆಗಿದ್ದ ಗ್ಯಾರಿ ಸ್ಟೇಡ್ ಅದೇ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ಕುಳಿತುಕೊಂಡ ವಿಶ್ವಕಪ್ ಗೆಲ್ಲಲು ಪ್ಲಾನ್ ಮಾಡಿದ್ದರು. ಆದ್ರೆ ಅದೃಷ್ಟ ಕೈ ಹಿಡಿಯಲಿಲ್ಲ. ಐಸಿಸಿಯ ವಿಚಿತ್ರ ನಿಯಮದಿಂದಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ರೆ ಈಗ ಅದೇ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೂತ್ರದಾರನಾಗಿ ನ್ಯೂಜಿಲೆಂಡ್ ತಂಡದ ಗೆಲುವಿನ ಪಾತ್ರದಾರನಾದ್ರು.